ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಹುದೊಡ್ಡ ಪಕ್ಷವಾಗಿ ಬಿಜೆಪಿ: ದೆಹಲಿ ವಿಧಾನಸಭೆ ಅತಂತ್ರ?

ದೆಹಲಿಯಲ್ಲಿ ಯಾವುದೇ ಪಕ್ಷವೂ ಕೂಡ ಸ್ಪಷ್ಟ ಬಹುಮತ ಪಡೆಯದೇ ಇರುವುದರಿಂದ ಅತಂತ್ರ ಸ್ಥಿತಿ ಎದುರಾಗಿದೆ.

Srinivasa Murthy VN
Updated On : 8 Dec 2013, 7:47 am

ನವದೆಹಲಿ: ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಸತತ 15 ವರ್ಷಗಳ ಅಧಿಕಾರಕ್ಕೆ ಅಂತ್ಯ ಹಾಡಿರುವ ದೆಹಲಿ ಜನತೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳನ್ನು ಅಪ್ಪಿಕೊಂಡಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ನ 15 ವರ್ಷಗಳ ಅಧಿಪತ್ಯಕ್ಕೆ ಕೊನೆಬಿದಿದ್ದು, ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ ಅರವಿಂದ್ ಕೇಜ್ರೀವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಜನತೆ ಮನ್ನಣೆ ನೀಡಿದ್ದಾರೆ. ಕಳೆದ ಬಾರಿಯ ಚುನಾವಣೆಯ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಪಕ್ಷ ಈ ಭಾರಿ ಆಡಳಿತ ವಿರೋಧಿ ಅಲೆಗೆ ಸಿಕ್ಕಿ ಧೂಳಿಪಟವಾಗಿದೆ. ಅಲ್ಲದೆ 3ನೇ ಸ್ಥಾನಕ್ಕೆ ತಳ್ಳಲ್ಪಡುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ದೆಹಲಿಯ ನೂಡೆಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರೀವಾಲ್ ಅವರಿಂದ 22 ಸಾವಿರ ಮತಗಳ ಅಂತರದಿಂದ ಸೋಲುಕಂಡಿದ್ದಾರೆ. ಅಂತೆಯೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾಗುತ್ತಿರುವ ಹರ್ಷವರ್ಧನ್ ಅವರು ಕೃಷ್ಣಾ ನಗರ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.

ಕೇಜ್ರೀವಾಲ್‌ರನ್ನು ಹೊಗಳಿದ ಅಣ್ಣಾ ಹಜಾರೆ
ಈ ನಡುವೆ ಪ್ರಸಕ್ತ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲ್ ಅವರ ಪಕ್ಷದ ಸಾಧನೆಯನ್ನು ಕೊಂಡಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು, ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಆಮ್ ಆದ್ಮಿ ಪಕ್ಷಕ್ಕೆ ಬಹಳ ಸಹಾಯವಾಗಿದೆ. ಅರವಿಂದ್ ಕೇಜ್ರೀವಾಲ್ ಯಶಸ್ಸನ್ನು ನಾನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ಒಂದು ದಿನ ಅರವಿಂದ್ ಕೇಜ್ರೀವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ.

ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಅಲೆ ಇದ್ದು ಮುಂದಿನ ಚುನಾವಣೆಗಳಲ್ಲಿಯೂ ದೇಶದ ಜನತೆ ಕಾಂಗ್ರೆಸ್ ವಿರುದ್ಧವಾಗಿಯೇ ಮತದಾನ ಮಾಡಲಿದ್ದಾರೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಗೆಲುವಿನ ಶ್ರೇಯಸ್ಸನ್ನು ಕ್ಷೇತ್ರದ ಜನತೆಗೆ ಅರ್ಪಿಸಿದ ಕೇಜ್ರೀವಾಲ್
ನ್ಯೂಡೆಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರೀವಾಲ್ ಅವರು ತಮ್ಮ ಗೆಲುವಿನ ಶ್ರೇಯವನ್ನು ಕ್ಷೇತ್ರದ ಜನತೆಗೆ ಅರ್ಪಿಸಿದ್ದಾರೆ. 'ಚುನಾವಣೆಯಲ್ಲಿನ ನನ್ನ ಗೆಲುವು ಕ್ಷೇತ್ರದ ಜನತೆಗೆ ಸಲ್ಲಬೇಕು. ಪಕ್ಷದ ಈ ಸಾಧನೆಗೆ ದೇಶದ ಜನತೆಯ ಪ್ರೋತ್ಸಾಹವೇ ಕಾರಣ' ಎಂದು ಕೇಜ್ರೀವಾಲ್ ಹೇಳಿದರು. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ವಿರುದ್ಧ ಸುಮಾರು 22 ಸಾವಿರ ಮತಗಳ ಅಂತರದಿಂದ ಅರವಿಂದ್ ಕೇಜ್ರೀವಾಲ್ ಅವರು ಗೆಲುವು ಸಾಧಿಸಿದ್ದಾರೆ. ಕೇಜ್ರೀವಾಲ್ ಅವರ ಗೆಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮ್ ಆದ್ಮಿ ಪಕ್ಷದ ದೆಹಲಿ ಕಚೇರಿ ಮುಂದೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಸಿಎಂ ಸ್ಥಾನಕ್ಕೆ ಶೀಲಾ ರಾಜಿನಾಮೆ: ಮತದಾರರನ್ನು ಮೂರ್ಖರೆಂದ ಶೀಲಾ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಮತ ಎಣಿಕೆಯ ಆರಂಭಿಕ ಹಂತದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಂತೆಯೇ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿದ್ದ ಶೀಲಾ ದಿಕ್ಷೀತ್ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ರಾಜಿನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೀಲಾ ದೀಕ್ಷಿತ್ ಅವರು, ಮತದಾರರ ಆಣತಿಗೆ ತಲೆ ಬಾಗುವುದಾಗಿ ಹೇಳಿದರು.

ಇದೇ ವೇಳೆ ಚುನಾವಣೆಯಲ್ಲಿನ ತಮ್ಮ ಸೋಲಿನ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಹತಾಶರಾದಂತೆ ಕಂಡುಬಂದ ಅವರು, 'ನಾವು ಮೂರ್ಖರಲ್ಲವೇ..?' ಎಂದು ಹೇಳಿ ಕಾರನ್ನು ಹತ್ತಿದರು.

ಹೊಸ ಪಕ್ಷವನ್ನು ಕಡೆಗಣಿಸಬೇಡಿ: ಒಮರ್ ಅಬ್ದುಲ್ಲಾ
ಶ್ರೀನಗರ:
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಯಶಸನ್ನು ಎಚ್ಚರಿಕೆಯಾಗಿ ಪರಿಗಣಿಸಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.

ಶ್ರೀನಗರದಲ್ಲಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು ಭಾರತದಲ್ಲಿ ಮಹತ್ತರ ರಾಜಕೀಯ ಬದಲಾವಣೆಗಳಾಗುತ್ತಿದ್ದು, ಹೊಸ ಪಕ್ಷಗಳನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ. ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರೀವಾಲ್ ಅವರ ಆಮ್ ಆದ್ಮಿ ಪಕ್ಷ ಎಲ್ಲರ ನಿರೀಕ್ಷೆಯನ್ನು ಮೀರಿ ಬೆಳೆದು ನಿಂತಿದ್ದು, ಆಡಳಿತಾ ರೂಢ ಕಾಂಗ್ರೆಸ್ ಪಕ್ಷವನ್ನೇ 3ನೇ ಸ್ಥಾನಕ್ಕೆ ತಳ್ಳಿದೆ.

ಒಟ್ಟು 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಆಡಳಿತ ನಡೆಸಲು 36 ಸ್ಥಾನಗಳ ಅವಶ್ಯಕತೆ ಇದ್ದು, ಪ್ರಸ್ತುತ ಬಿಜೆಪಿ 32 ಸ್ಥಾನ, ಆಮ್ ಆದ್ಮಿ 28 ಸ್ಥಾನ, ಕಾಂಗ್ರೆಸ್ ಪಕ್ಷ 8 ಸ್ಧಾನ ಮತ್ತು ಇತರರು 2 ಸ್ಥಾನ ಪಡೆದಿದ್ದಾರೆ. ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದರೆ ಅದಕ್ಕೆ ಇನ್ನೂ 3 ಸ್ಥಾನಗಳ ಅವಶ್ಯಕತೆ ಇದೆ. ಒಂದು ವೇಳೆ ಅದು ಪಕ್ಷೇತರರೊಂದಿಗೆ ಕೈಜೋಡಿಸದರೂ ಕೂಡ ಅದಕ್ಕೆ ಮತ್ತೆ ಒಂದು ಸ್ಥಾನದ ಅವಶ್ಯಕತೆ ಬೀಳುತ್ತದೆ.

ಹೀಗಾಗಿ ಬಿಜೆಪಿ ಬಹುಮತ ಸಾಬೀತುಪಡಿಸಲು ಆಮ್ ಆದ್ಮಿ ಪಕ್ಷದ ಮೊರೆ ಹೋಗಬೇಕಾಗುತ್ತದೆ. ಆದರೆ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರೀವಾಲ್ ಅವರು ಈಗಾಗಲೇ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷದಲ್ಲಿ ಉಳಿಯಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ದೆಹಲಿ ವಿಧಾನಸಭೆಗೆ ಅತಂತ್ರ ಸ್ಥಿತಿ ಎದುರಾಗಿದೆ.

ಒಟ್ಟಾರೆ ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿಸಲಾಗುತ್ತಿದ್ದ ಪ್ರಸಕ್ತ ಚುನಾವಣಾ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್ ಬಹುತೇಕ ಧೂಳಿಪಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement