'ಕೈ' ಸೋಲಿಗೆ 'ಕೈ'ನೇ ಕಾರಣ: ಶೀಲಾ ದೀಕ್ಷಿತ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ..
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, ತಮ್ಮ ಸೋಲಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಶೀಲಾ, ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳಿಂದ ತಮಗೆ ನಿರೀಕ್ಷಿತ ಮಟ್ಟದ ಬೆಂಬಲ ದೊರೆಯಲಿಲ್ಲ. ಹೀಗಾಗಿ ನಾವು ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಾಣುವಂತಾಯಿತು. ತಮ್ಮ ಈ ಸೋಲಿಗೆ ಸ್ವತಃ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿರೋಧ ಪಕ್ಷಗಳಲ್ಲಿದ್ದ ಒಗ್ಗಟ್ಟು ತಮ್ಮ ಪಕ್ಷದಲ್ಲಿ ಕಂಡುಬರಲಿಲ್ಲ. ಅಲ್ಲದೆ ಹಿರಿಯ ನಾಯಕರಿಂದ ಅಗತ್ಯವಾದ ಬೆಂಬಲ ಕೂಡ ಸಿಗಲಿಲ್ಲ. ಹೀಗಾಗಿಯೇ ನಾವು ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ಶೀಲಾ ಹೇಳಿದರು. ಅಂತೆಯೇ ಆಮ್ ಆದ್ಮಿ ಪಕ್ಷದ ಯಶಸ್ಸಿನ ಕುರಿತು ಮಾತನಾಡಿದ ಅವರು, ನಾವು ಆ ಪಕ್ಷವನ್ನು ಕಡೆಗಣಿಸಿದ್ದೆವು. ಅರವಿಂದ್ ಕೇಜ್ರೀವಾಲ್ ನನಗಿಂತ ಬುದ್ದಿವಂತರು ಎಂದಷ್ಟೇ ಶೀಲಾ ಹೇಳಿದರು.
ಆಮ್ ಆದ್ಮಿ ಜನತೆಯ ಹಾದಿ ತಪ್ಪಿಸುತ್ತಿದೆ
ಇದೇ ವೇಳೆ ಕೇಜ್ರೀವಾಲ್ ಮತ್ತು ಅವರ ಪಕ್ಷದ ವಿರುದ್ಧ ಕಿಡಿಕಾರಿದ ಶೀಲಾ ದೀಕ್ಷಿತ್ ಅವರು, ಆಮ್ ಆದ್ಮಿ ಪಕ್ಷ ಜನತೆಯ ಹಾದಿ ತಪ್ಪಿಸುತ್ತಿದೆ. ಚುನಾವಣಾ ಪೂರ್ವದಲ್ಲಿ ಅವರು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿ. ಕೇವಲ ಒಂದು ಚುನಾವಣೆಯಿಂದ ರಾಜಕೀಯ ಪಕ್ಷವೊಂದರ ಅಳಿವು, ಉಳಿವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅಂತೆಯೇ ಎಎಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೀಲಾ, ಯಾವುದೇ ಕಾರಣಕ್ಕೂ ನಾವು ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಅಂತೆಯೇ ಎಎಪಿಗೆ ಕಾಂಗ್ರೆಸ್ ಪಕ್ಷದ ಬೆಂಬಲ ಕೂಡ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ನ್ಯೂಡೆಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಮತ್ತು ನ್ಯೂಡೆಲ್ಲಿ ಕ್ಷೇತ್ರದ ಅಭ್ಯರ್ಥಿ ಅರವಿಂದ್ ಕೇಜ್ರೀವಾಲ್ ಅವರ ವಿರುದ್ಧ ಸುಮಾರು 22 ಸಾವಿರ ಮತಗಳ ಅಂತರದಿಂದ ಸೋಲುಕಂಡಿದ್ದರು.