ಗುಲ್ಬರ್ಗಾ: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ದಶರಥ ನಾಯಕ್ ಅವರನ್ನು ಶನಿವಾರ ಗುಲ್ಬರ್ಗಾ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರಾದ ನಾಂದೇಡ್ ಬಳಿ ತಲೆಮರೆಸಿಕೊಂಡಿದ್ದ ದಶರಥ ನಾಯಕ್‌ನ್ನು ಇಂದು ಮಧ್ಯಾಹ್ನ ಗುಲ್ಬಾರ್ಗಾ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 27ರಂದು ನೊಂದ ವಿದ್ಯಾರ್ಥಿನಿಗೆ ವಿವಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗುಲ್ಬರ್ಗಾ ವಿವಿಯ ಅರ್ಥಶಾಸ್ತ್ರ ವಿಭಾಗದ ಪೊಫೆಸರ್ ದಶರತ್ ನಾಯಕ್ ಅವರ ಬಂಧನಕ್ಕೆ ಜಾಲ ಬೀಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಶರಥ ನಾಯಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಕಳೆದ ಶನಿವಾರ ದಿಢೀರ್ ಸಭೆ ಸೇರಿದ್ದ ವಿವಿ ನೀತಿನಿರೂಪಕ ಉನ್ನತಾಂಗ ಸಿಂಡಿಕೇಟ್‌ನಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯ್ತು. ಇತ್ತ ಸಿಂಡಿಕೇಟ್ ನಿರ್ಣಯ ಕೈಗೊಳ್ಳುತ್ತಿದ್ದಂತೆಯೇ ಅತ್ತ ಕುಲಪತಿ ಡಾ. ಈ.ಟಿ. ಪುಟ್ಟಯ್ಯನವರು ದಶರಥ ನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
'ಕನ್ನಡಪ್ರಭ' ಬಯಲಿಗೆಳೆದಿತ್ತು: ಅರ್ಥಶಾಸ್ತ್ರ ವಿಭಾಗದಲ್ಲಿನ ಈ ಅನರ್ಥವನ್ನು ಮೊಟ್ಟಮೊದಲಿಗೆ 'ಕನ್ನಡಪ್ರಭ' ತನ್ನ ಡಿ.5ರ ಸಂಚಿಕೆಯಲ್ಲಿ ವರದಿ ಮಾಡಿ ಬಯಲಿಗೆಳೆದಿತ್ತು. 'ಗೈಡ್ ಕಂಪ್ಯೂಟರ್‌ನಲ್ಲಿ ಅಶ್ಲೀಲ ಚಿತ್ರ, ಪೊಲೀಸರಿಗೆ ಸಂಶೋಧನಾ ವಿದ್ಯಾರ್ಥಿನಿ ದೂರು' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ ಜ್ಞಾನಗಂಗೆ ಅಂಗಳವಷ್ಟೇ ಅಲ್ಲ, ಶಿಕ್ಷಣ ಪ್ರೇಮಿಗಳ ವಲಯದಲ್ಲೆಲ್ಲಾ ಸಂಚಲನ ಉಂಟು ಮಾಡಿತ್ತು.
ಈ ಸುದ್ದಿ ಪ್ರಕಟವಾದ ದಿನವೇ ವಿದೇಶದಿಂದ ಗುಲ್ಬರ್ಗಕ್ಕೆ ಬಂದಿಳಿದ ಕುಲಪತಿ ಡಾ. ಪುಟ್ಟಯ್ಯನವರು ತಕ್ಷಣ ಮಧ್ಯಸ್ಥಿಕೆ ವಹಿಸಿದ್ದಲ್ಲದೆ ದೂರು ನೀಡಿದ ಸಂಶೋಧಕಿಯ ಬೇಡಿಕೆಯಂತೆ ತಕ್ಷಣ ಪಿಎಚ್‌ಡಿ ಮಾರ್ಗದರ್ಶಕರನ್ನು ಬದಲಿಸಿ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.