ಆಂಧ್ರ ರಾಜಕೀಯ ಪಕ್ಷಗಳಿಗೆ ಆಸ್ಪದವಿಲ್ಲ: ಕೆಸಿಆರ್
ನೂತನ ತೆಲಂಗಾಣ ರಾಜ್ಯದಲ್ಲಿ ಯಾವುದೇ ಆಂಧ್ರ ಪ್ರದೇಶ ರಾಜಕೀಯ ಪಕ್ಷಗಳಿಗೆ ಆಸ್ಪದ ನೀಡುವುದಿಲ್ಲ ಟಿಆರ್ಎಸ್ ಅಧ್ಯಕ್ಷ ಕೆ.ಚಂದ್ರ ಶೇಖರರಾವ್ ತಿಳಿಸಿದ್ದಾರೆ.
ಹೈದರಾಬಾದ್: ನೂತನ ತೆಲಂಗಾಣ ರಾಜ್ಯದಲ್ಲಿ ಯಾವುದೇ ಆಂಧ್ರ ಪ್ರದೇಶ ರಾಜಕೀಯ ಪಕ್ಷಗಳಿಗೆ ಆಸ್ಪದ ನೀಡುವುದಿಲ್ಲ ಎಂದು ತೆಲಂಗಾಣ ರಾಷ್ಟ ಸಮಿತಿ (ಟಿಆರ್ಎಸ್) ಅಧ್ಯಕ್ಷ ಕೆ.ಚಂದ್ರ ಶೇಖರರಾವ್ ತಿಳಿಸಿದ್ದಾರೆ.
ಹೈದರಾಬಾದಿನಲ್ಲಿರುವ ತೆಲಂಗಾಣ ಭವನದಲ್ಲಿ ಮಾತನಾಡಿದ ಚಂದ್ರ ಶೇಖರ ರಾವ್ ಅವರು, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮತ್ತು ಆಂಧ್ರಪ್ರದೇಶದ ಯಾವುದೇ ರಾಜಕೀಯ ಪಕ್ಷಗಳನ್ನು ತಾವು ತಮ್ಮ ನೂತನ ರಾಜ್ಯದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ತೆಲಂಗಾಣ ಭಾಗದಲ್ಲಿ ಅಸ್ತಿತ್ವದಲ್ಲಿರುವ ತೆಲುಗುದೇಶಂ ಪಕ್ಷ ಕೂಡ ತೆಲಂಗಾಣ ರಾಜ್ಯ ರಚನೆಯ ನಂತರ ಹೇಳ ಹಸರಿಲ್ಲದಂತೆ ಹೋಗುತ್ತದೆ. ಬಿಹಾರ ರಾಜ್ಯ ರಚನೆಗೂ ಮೊದಲು ಜಾರ್ಖಂಡ್ನಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪಕ್ಷ ಪ್ರಬಲವಾಗಿತ್ತು. ಆದರೆ ಬಿಹಾರ ಪ್ರತ್ಯೇಕ ರಾಜ್ಯವಾದ ನಂತರ ಬಿಹಾರದಲ್ಲಿ ಲಾಲೂ ಪ್ರಸಾದ್ ಅವರ ಪಕ್ಷ ಒಂದು ಸ್ಥಾನ ಪಡೆಯಲು ಕೂಡ ವಿಫಲವಾಗಿತ್ತು.
ತೆಲುಗುದೇಶಂ ಪಕ್ಷಕ್ಕೂ ತೆಲಂಗಾಣ ರಾಜ್ಯದಲ್ಲಿ ಇದೇ ಪರಿಸ್ಥಿತಿ ಎದುರಾಗಲಿದೆ ಎಂದು ಚಂದ್ರಶೇಖರ್ ರಾವ್ ಹೇಳಿದರು.