ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜ.4 ವರೆಗೆ ತೇಜಪಾಲ್ ಬಂಧನ ಅವಧಿ ವಿಸ್ತರಣೆ

ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಜನವರಿ 4ರವರೆಗೆ ವಿಸ್ತರಿಸಿದೆ.

Srinivasa Murthy VN
Updated On : 23 Dec 2013, 3:14 am

ಪಣಜಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಜನವರಿ 4ರವರೆಗೆ ವಿಸ್ತರಿಸಿದೆ.

ತರುಣ್ ತೇಜ್ಪಾಲ್ ಅವರ 12 ದಿನಗಳ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ, ಪಣಜಿ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಾರಿಕಾ ಫಾಲ್ದೇಸಾಯಿ ಅವರು, ತೇಜ್ಪಾಲ್ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 12 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮೊದಲು ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಿದ ತೇಜಪಾಲ್ ಪರ ವಕೀಲರು, 'ಪ್ರಕರಣ ಸಂಬಂಧ ಕಳೆದ 12 ದಿನಗಳಿಂದ ತಮ್ಮ ಕಕ್ಷೀದಾರರು ಪೊಲೀಸ್ ಬಂಧನದಲ್ಲಿದ್ದು, ಈ ವರೆಗೂ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿಲ್ಲ. ಹೀಗಾಗಿ ತಮ್ಮ ಕಕ್ಷೀದಾರರಿಗೆ ಕೂಡಲೇ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದರು. ತೇಜ್ಪಾಲ್ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಪರ ವಕೀಲರು, 'ಪೊಲೀಸರು ಸೂಕ್ತ ರೀತಿಯಲ್ಲಿಯೇ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ತಮ್ಮ ವಾದ ಮಂಡಿಸಿದರು. ಉಭಯ ವಕೀಲರ ವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಇದೇ ಡಿಸೆಂಬರ್ 26ಕ್ಕೆ ಮುಂದೂಡಿ, ತೇಜ್ಪಾಲ್ ಬಂಧನ ಅವಧಿಯನ್ನು ಜನವರಿ 4ರವರಗೆ ವಿಸ್ತರಿಸಿದೆ.

ಗೋವಾದಲ್ಲಿನ ಖಾಸಗಿ ಹೊಟೆಲ್ನಲ್ಲಿ ತೆಹಲ್ಕಾ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಪತ್ರಿಕೆಯ ಸಂಪಾದಕ ತರುಣ್ ತೇಜ್ಪಾಲ್ ಅವರು, ತಮ್ಮ ಮಗಳ ವಯಸ್ಸಿನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಮಾಧ್ಯಮಗಳಲ್ಲಿ ಪ್ರಕರಣ ಬಯಲಾಗಿ ತೇಜ್ಪಾಲ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ಗೋವಾದ ಪಣಜಿ ನ್ಯಾಯಾಲಯದಲ್ಲಿಯೂ ಯುವತಿ ದೂರುದಾಖಲಿಸಿದ್ದಳು.

ನವೆಂಬರ್ 30ರಂದು ವಿಚಾರಣೆಗೆ ಹಾಜರಾಗುವ ಸಂಬಂಧ ಗೋವಾಗೆ ಆಗಮಿಸಿದ್ದ ತರುಣ್ ತೇಜ್ಪಾಲ್ ಅವರನ್ನು ಗೋವಾ ಪೊಲೀಸರು ಪಣಜಿ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ, ಐಪಿಸಿ ಸೆಕ್ಷನ್ 354-ಎ(ಲೈಂಗಿಕ ಕಿರುಕುಳ), 376(ಅತ್ಯಾಚಾರ), 376(2,ಕೆ)(ಔದ್ಯೋಗಿಕ ಆಮಿಷವೊಡ್ಡಿ ಅತ್ಯಾಚಾರ) ಪ್ರಕರಣ ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement