ದೇವಯಾನಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ
ವೀಸಾ ವಂಚನೆ ಆರೋಪ ಎದುರಿಸುತ್ತಿರುವ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರಿಗೆ ಯುಎಸ್ ನ್ಯಾಯಾಲಯ, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ನ್ಯೂಯಾರ್ಕ್: ವೀಸಾ ವಂಚನೆ ಆರೋಪ ಎದುರಿಸುತ್ತಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರಿಗೆ ಯುಎಸ್ ನ್ಯಾಯಾಲಯ, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಭಾರತ ಮತ್ತು ಅಮೆರಿಕ ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಬಂಧನ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ದೊರೆತಿದೆ. ದೇವಯಾನಿ ಬಂಧನದ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಮೆರಿಕ ಕೊಂಚ ಮೃದು ಧೋರಣೆ ತಳೆದಿದೆ. ನಕಲಿ ವೀಸಾ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೇವಯಾನಿ ಅವರಿಗೆ ಖುದ್ದು ಹಾಜರಾತಿಯಿಂದ ನ್ಯಾಯಾಲಯ ವಿನಾಯಿತಿ ನೀಡಿದೆ.
ಇದೇ ಡಿಸೆಂಬರ್ 12 ರಂದು ನ್ಯೂಯಾರ್ಕ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದೇವಯಾನಿ ಖೋಬ್ರಾಗಡೆ ಅವರನ್ನು, ಅಮೆರಿಕದ ಅಧಿಕಾರಿಗಳು ಅಮಾನುಷವಾಗಿ ನಡೆಸಿಕೊಂಡಿದ್ದರು. ಮಿತ್ರ ರಾಷ್ಟ್ರವೊಂದರ ರಾಜತಾಂತ್ರಿಕ ಅಧಿಕಾರಿ ಎನ್ನುವುದನ್ನು ಕೂಡ ಪರಿಗಣಿಸದ ಅಧಿಕಾರಿಗಳು, ದೇವಯಾನಿ ಅವರಿಗೆ ಕೈಕೋಳ ತೊಡಿಸಿ ಬಂಧಿಸಿದ್ದರು. ಅಷ್ಟೇ ಅಲ್ಲದೆ ವಿಚಾರಣೆ ಸಂದರ್ಭದಲ್ಲಿ ದೇವಯಾನಿ ಅವರನ್ನು ವಿವಸ್ತ್ರಗೊಳಿಸಿ, ಕ್ಯಾವಿಟಿ ಸರ್ಚ್ (ಅಂಗಾಗ ಶೋಧ) ಮಾಡುವ ಮೂಲಕ ಅಮಾನವೀಯತೆ ತೋರಿದ್ದರು.
ಈ ಸುದ್ದಿ ಮಾಧ್ಯಮಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿ, ಅಮೆರಿಕದ ವಿರುದ್ಧ ಭಾರತ ಆಕ್ರೋಶ ಭರಿತವಾಗಿ ತಿರುಗಿಬಿದ್ದಿತ್ತು. ವಿಯೆನ್ನಾ ಒಪ್ಪಂದದಂತೆ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ಭಾರತ ಹಿಂಪಡೆದಿತ್ತು. ಅವರಿಗೆ ಒದಗಿಸಲಾಗಿದ್ದ ರಕ್ಷಣೆಯನ್ನು ವಾಪಸ್ ಪಡೆದಿತ್ತು. ಅಲ್ಲದೆ ಕೂಡಲೇ ಭಾರತದಲ್ಲಿ ನೆಲೆಸಿರುವ ಅಮೆರಿಕದ ಅಧಿಕಾರಿಗಳು ಮತ್ತು ಇತರರ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಅಮೆರಿಕ ದೂತವಾಸ ಅಧಿಕಾರಿಗಳಿಗೆ ಆದೇಶಿಸಿತ್ತು.
ಅಲ್ಲದೆ ಭಾರತೀಯ ದೂತವಾಸ ಅಧಿಕಾರಿಯಾಗಿದ್ದ ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗ ಮಾಡಿ ಆದೇಶ ಹೊರಡಿಸುವುದರ ಮೂಲಕ ಅಮೆರಿಕಕ್ಕೆ ದಿಟ್ಟ ತಿರುಗೇಟು ನೀಡಿತ್ತು.
ಇದೀಗ ಭಾರತದ ತೀವ್ರ ಆಕ್ಷೇಪ ಮತ್ತು ತಿರುಗೇಟಿನಿಂದಾಗ ದೇವಯಾನಿ ಪ್ರಕರಣದಲ್ಲಿ ಅಮೆರಿಕ ಮೃದುಧೋರಣೆ ತಳೆಯಲು ಆರಂಭಿಸಿದಂತಿದೆ. ಹೀಗಾಗಿಯೇ ನಕಲಿ ವೀಸಾ ಪ್ರಕರಣದಲ್ಲಿ ದೇವಯಾನಿ ಅವರು ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ.