ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರ
ಪ್ರೀತಿಸಿದ ಪ್ರಿಯಕರನೇ ತನ್ನ ಪ್ರಿಯತಮೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಹೈದರಾಬಾದ್: ಪ್ರೀತಿಸಿದ ಪ್ರಿಯಕರನೇ ತನ್ನ ಪ್ರಿಯತಮೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
21 ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ಅರುಣಾ ಎಂಬಾಕೆಯನ್ನು ಆಕೆಯ ಪ್ರಿಯಕರ ನಾಕರ್‌ಕಂಟಿ ಸೈದುಲು ಎಂಬಾತ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂದಿದ್ದಾನೆ. ಮೃತ ಪ್ರಿಯತಮೆ ಅರುಣಾ ಮೂಲತಃ ನಲ್ಗೊಂಡಾ ಜಿಲ್ಲೆಯ ಕುರಂಪಲ್ಲಿ ಗ್ರಾಮದವಳು. ಪೊಲೀಸ್ ಮೂಲಗಳ ಪ್ರಕಾರ, ಸೈದುಲು ಕೂಡ ಆದೇ ಗ್ರಾಮದ ಮಾಜಿ ಪಂಚಾಯತಿ ಅಧ್ಯಕ್ಷನಾಗಿದ್ದ. ಕಳೆದ ಮೂರು ವರ್ಷಗಳ ಹಿಂದಷ್ಟೇ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಅರುಣಾ ವ್ಯಾಸಂಗ ಮಾಡುತ್ತಿದ್ದ ಖಾಸಗಿ ಕಾಲೇಜಿನಲ್ಲಿಯೇ ಸೈದುಲು ಆಕೆಯನ್ನು ಭೇಟಿ ಮಾಡಿ ಹೋಗುತ್ತಿದ್ದ. ಅರುಣಾ ಕೂಡ ಸೈದುಲುವಿನ ಪಂಚಾಯಿತಿ ಕಚೇರಿಗೆ ಆಗಾಗ ತೆರಳಿ ಮಾತುಕತೆ ನಡೆಸುತ್ತಿದ್ದಳು. ಕಳೆದ ಶನಿವಾರ ಅರುಣಾಗೆ ಕರೆ ಮಾಡಿದ್ದ ಸೈದುಲು ಆಕೆಯನ್ನು ತನ್ನ ಕಚೇರಿ ಬರ ಹೇಳಿದ್ದ. ಆದರೆ ಅರುಣಾ ಕಚೇರಿಗೆ ಆಗಮಿಸಿರಲಿಲ್ಲ. ಇದರಿಂದ ತೀವ್ರ ಕ್ರೋಧಗೊಂಡಿದ್ದ ಸೈದುಲು ಆಕೆಯನ್ನು ಉಪಾಯವಾಗಿ ತನ್ನ ಕಚೇರಿಗೆ ಕರೆಸಿಕೊಂಡು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಬಹುತೇಕ ಸುಟ್ಟು ಹೋಗಿದ್ದ ಅರುಣಾಳನ್ನು ಪ್ರಿಯಕರ ಸೈದುಲು ತನ್ನ ಸ್ನೇಹಿತರೊಡನೆ ಕೂಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದನು. ಆದರೆ ಇದೀಗ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಂದರ ಹೂವಾಗಿ ಅರಳಬೇಕಿದ್ದ ಪ್ರೀತಿಗೆ ಪ್ರಿಯಕರನೇ ಬೆಂಕಿ ಇಟ್ಟು ಮೊಗ್ಗಿನಲ್ಲಿಯೇ ಚಿವುಟಿ ಹಾಕಿರುವುದು ನಿಜಕ್ಕೂ ದುರದೃಷ್ಟಕರ.