ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದ ಧೂಮ್-3
ಇತ್ತೀಚೆಗೆ ತೆರೆಕಂಡ ಅಮೀರ್ ಖಾನ್ ಅಭಿನಯದ ಧೂಮ್-3 ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಪ್ರಮಾಣದಲ್ಲಿ ಗಳಿಕೆ ಕಂಡಿದೆ.
ಮುಂಬೈ: ಇತ್ತೀಚೆಗೆ ತೆರೆಕಂಡ ಅಮೀರ್ ಖಾನ್ ಅಭಿನಯದ ಧೂಮ್-3 ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಪ್ರಮಾಣದಲ್ಲಿ ಗಳಿಕೆ ಕಂಡಿದೆ.
ಕಳೆದ ವಾರವಷ್ಟೇ ತೆರೆಕಂಡಿದ್ದ ಧೂಮ್-3 ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೇವಲ ಒಂದೇ ವಾರದಲ್ಲಿ 107 ಕೋಟಿ ರುಪಾಯಿಗಳನ್ನು ಗಳಿಕೆ ಮಾಡಿದೆ. ಆ ಮೂಲಕ ಈ ಹಿಂದೆ ದಾಖಲೆ ನಿರ್ಮಿಸಿದ್ದ ಹೃತಿಕ್ ರೋಷನ್ ಅಭಿನಯದ ಕ್ರಿಶ್-3 ಸಿನಿಮಾದ ದಾಖಲೆಯನ್ನು ಅಳಿಸಿಹಾಕಿದೆ.
ದೇಶಾದ್ಯಂತ ದಾಖಲೆ ಪ್ರಮಾಣದ ಸುಮಾರು 3000 ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಧೂಮ್-3 ಚಿತ್ರ, ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿತ್ತು. ಆರಂಭಿಕ 2 ದಿನಗಳಲ್ಲಿ 78 ಕೋಟಿ ರುಪಾಯಿಗಳನ್ನು ಬಾಚಿತ್ತು. ವಾರಂತ್ಯದ ವೇಳೆಗೆ ಇದು 100 ಕೋಟಿ ರುಪಾಯಿ ತಲುಪುತ್ತದೆ ಎಂದು ಅಂದಾಜಿಸಲಾಗಿತ್ತು. ನಿರೀಕ್ಷೆಯಂತೆಯೇ ಈ ಚಿತ್ರ 107 ಕೋಟಿ ರುಪಾಯಿಗಳನ್ನು ಗಳಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
ಹಿಂದಿ ಭಾಷೆಯ ಧೂಮ್-3 ಗಳಿಸಿದ್ದು ಬರೊಬ್ಬರಿ 100.76 ಕೋಟಿಗಳಾದರೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ 6.85 ಕೋಟಿ ರು.ಗಳನ್ನು ಗಳಿಸಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಡಬ್ಬಿಂಗ್ ಚಿತ್ರವೊಂದು ತೆರೆಕಂಡ ಒಂದು ವಾರದಲ್ಲಿ ಗಳಿಸಿದ ಅತ್ಯಧಿಕ ಗಳಿಕೆ ಇದಾಗಿದೆ.
ಯಶ್ ರಾಜ್ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದ ಈ ಚಿತ್ರದ ಒಟ್ಟಾರೆ ಬಜೆಟ್ 150 ಕೋಟಿಗಳಾಗಿತ್ತು. ಆರಂಭದಲ್ಲಿ ತನ್ನ ಬಜೆಟ್ನಿಂದಲೇ ಹೆಸರು ಮಾಡಿದ್ದ ಈ ಚಿತ್ರ ಇದೀಗ ಗಳಿಕೆಯಲ್ಲೂ ಭಾರಿ ಸದ್ದು ಮಾಡುತ್ತಿರುವುದು ಚಿತ್ರ ನಿರ್ಮಾಪಕರಿಗೆ ಸಂತಸ ತಂದಿದೆ.