ದೇವಯಾನಿ ಪ್ರಕರಣದಲ್ಲಿ ಯುಎಸ್ ಅಧಿಕಾರಿಗಳ ಪ್ರಮಾದ..?
ದೇವಯಾನಿ ಬಂಧನ ಪ್ರಕರಣದಲ್ಲಿ ತನಿಖಾಧಿಕಾರಿ ಗಳು ದೊಡ್ಡ ಪ್ರಮಾದ ಎಸಗಿರುವುದು ಕಂಡುಬಂದಿದೆ ಎಂದು ದೇವಯಾನಿ ಪರ ವಕೀಲರು ಹೇಳಿದ್ದಾರೆ.
ನ್ಯೂಯಾರ್ಕ್: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದಲ್ಲಿ ಅಮೆರಿಕದ ತನಿಖಾಧಿಕಾರಿಗಳು ಬಹುದೊಡ್ಡ ಪ್ರಮಾದ ಎಸಗಿರುವುದು ಕಂಡುಬಂದಿದೆ ಎಂದು ದೇವಯಾನಿ ಪರ ವಕೀಲರು ಹೇಳಿದ್ದಾರೆ.
ನಿನ್ನೆ ಖೋಬ್ರಾಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಪರೀಶಿಲಿಸಿದ ವಕೀಲ ಡೇನಿಯಲ್ ಆರ್ಶಾಕ್ ಈ ಅಂಶವನ್ನು ಮನಗಂಡಿದ್ದಾರೆ. ಫೆಡರಲ್ ಅಧಿಕಾರಿಗಳು ಸಲ್ಲಿಸಿರುವ ಡಿಎಸ್-160 ದಾಖಲೆಯಲ್ಲಿ ಮನೆಗೆಲಸದಾಕೆಗೆ 4500 ಡಾಲರ್ಗಳಷ್ಟು ಮಾಸಿಕ ಭತ್ಯೆ ನೀಡಬೇಕಿತ್ತು ಎಂದು ನಮೂದಿಸಿದ್ದಾರೆ. ಆದರೆ ನವದೆಹಲಿಯಲ್ಲಿರುವ ಅಮೆರಿಕ ರಾಜತಾಂತ್ರಿಕ ಕಚೇರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ದೇವಯಾನಿ ಅವರ ಮನೆಗೆಲಸದಾಕೆ ಸಂಗೀತಾ ರಿಚರ್ಡ್ಸ್ ಅವರಿಗೆ ಪ್ರತಿ ತಿಂಗಳು 1, 560 ಡಾಲರ್ ನೀಡಬೇಕು ನಮೂದಾಗಿದೆ.
ಅಲ್ಲದೆ ಅಮೆರಿಕದ ವೀಸಾ ಪಡೆಯಲಿಚ್ಚಿಸುವವರು ತಮ್ಮ ವಲಸೆ ವೀಸಾದ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಆದರೆ ಸಂಗೀತಾ ರಿಚರ್ಡ್ ಅವರ ಪ್ರಕರಣದಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ. ಸಂಗೀತಾ ರಿಚರ್ಡ್ ಅವರ ದಾಖಲೆಯನ್ನು ಯಾರೋ ಉದ್ದೇಶಪೂರ್ವಕವಾಗಿಯೇ ತಿದ್ದುಪಡಿ ಮಾಡಿರುವ ಸಾಧ್ಯತೆ ಇದ್ದು, ಇದು ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಡೇನಿಯಲ್ ತಮ್ಮ ವಾದ ಮಂಡಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ನಡೆಸಿದ ಫೆಡರಲ್ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.