ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಶನಿವಾರ ಕೇಜ್ರೀವಾಲ್ ಪ್ರಮಾಣ ವಚನ ಸ್ವೀಕಾರ

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರೀವಾಲ್ ಅವರು ಶನಿವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Srinivasa Murthy VN
Updated On : 25 Dec 2013, 4:03 am

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರೀವಾಲ್ ಅವರು ಶನಿವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಅಣ್ಣಾ ತಂಡಕ್ಕೆ ವೇದಿಕೆಯಾಗಿದ್ದ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿಯೇ ನಾಳೆ ಕೇಜ್ರೀವಾಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇಜ್ರೀವಾಲ್ ಅವರೊಂದಿಗೆ ಅವರ ಆಮ್ ಆದ್ಮಿ ಪಕ್ಷದ 6 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕರಾದ ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್, ಸೋಮನಾಥ್ ಭಾರ್ತಿ, ರಾಖಿ ಬಿರ್ಲಾ, ಸತ್ಯೇಂದ್ರ ಜೈನ್ ಮತ್ತು ಗಿರೀಶ್ ಸೋನಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಪ್ರಮಾಣ ವಚನಕ್ಕೆ ರಾಮ್‌ಲೀಲಾ ಮೈದಾನ ಸಜ್ಜು
ನಾಳೆ ಮಧ್ಯಾಹ್ನ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ರಾಮ್‌ಲೀಲಾ ಮೈದಾನ ಸಕಲ ರೀತಿಯಲ್ಲಿ ಸಜ್ಜುಗೊಳ್ಳುತ್ತಿದ್ದು, ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ನಾಳಿನ ಸಮಾರಂಭಕ್ಕೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೇರಿದಂತೆ ದೆಹಲಿಯ ಸುಮಾರು 50 ಸಾವಿರ ನಾಗರೀಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ದೆಹಲಿ ಪೊಲೀಸರು ಕೂಡ ಸುರಕ್ಷತೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ದೆಹಲಿ ಪೊಲೀಸ್ ಕಮೀಷನರ್ ಭೀಮ್ ಸೇನ್ ಬಸ್ಸಿ ಅವರು ಅಧಿಕಾರಿಗಳ ಸಭೆ ಕರೆದಿದ್ದು ಚರ್ಚೆ ನಡೆಸಲಿದ್ದಾರೆ.

ಎಎಪಿಗೆ ಬೆಂಬಲ ನೀಡಿ 'ಕೈ' ಚಡಪಡಿಕೆ
ಇತ್ತ ಅರವಿಂದ್ ಕೇಜ್ರೀವಾಲ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವತ್ತ ಸಿದ್ಧತೆಯಲ್ಲಿ ತೊಡಗಿದ್ದರೆ, ಅತ್ತ ಎಎಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಎಎಪಿಗೆ ಬೆಂಬಲ ನೀಡುವ ತೀರ್ಮಾನ ಏಕಪಕ್ಷೀಯವಾಗಿದ್ದು, ಕಾಂಗ್ರೆಸ್ ಮುಖಂಡರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಆರೋಪಿಸಿದ್ದಾರೆ.

ಎಎಪಿಗೆ ಬೆಂಬಲ ಸೂಚಿಸುವ ಮೂಲಕ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ತಡೆದಿದ್ದೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ, ಇದೀಗ ತನ್ನದೇ ಮುಖಂಡರ ಭಿನ್ನಮತದಿಂದಾಗಿ 'ಕೈ' ಕೈ ಹಿಸುಕಿಕೊಳ್ಳುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement