5 ದಿನದಲ್ಲಿ 233 ಕೋಟಿ ಗಳಿಸಿದ ಧೂಮ್-3
ಅಮೀರ್ ಖಾನ್ ಅಭಿನಯದ ಧೂಮ್-3 ಚಿತ್ರ 5 ದಿನದಲ್ಲಿ ಬರೊಬ್ಬರಿ 233 ಕೋಟಿ ಹಣ ಗಳಿಕೆ ಮಾಡುವ ಮೂಲಕ ಬಾಲಿವುಡ್ ಇತಿಹಾಸದಲ್ಲಿಯೇ ನೂತನ ದಾಖಲೆ ನಿರ್ಮಿಸಿದೆ.
ಮುಂಬೈ: ಅಮೀರ್ ಖಾನ್ ಅಭಿನಯದ ಧೂಮ್-3 ಚಲನಚಿತ್ರ ತೆರೆಕಂಡ ಐದೇ ದಿನದಲ್ಲಿ ಬರೊಬ್ಬರಿ 233 ಕೋಟಿ ಹಣ ಗಳಿಕೆ ಮಾಡುವ ಮೂಲಕ ಬಾಲಿವುಡ್ ಇತಿಹಾಸದಲ್ಲಿಯೇ ನೂತನ ದಾಖಲೆ ನಿರ್ಮಿಸಿದೆ.
ಕಳೆದ ವಾರವಷ್ಟೇ ತೆರೆಕಂಡಿದ್ದ ಧೂಮ್-3 ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೇವಲ ಐದೇ ದಿನದಲ್ಲಿ 233 ಕೋಟಿ ರುಪಾಯಿಗಳನ್ನು ಗಳಿಕೆ ಮಾಡಿದೆ. ಆ ಮೂಲಕ ಈ ಹಿಂದೆ ದಾಖಲೆ ನಿರ್ಮಿಸಿದ್ದ ಹೃತಿಕ್ ರೋಷನ್ ಅಭಿನಯದ ಕ್ರಿಶ್-3 ಸಿನಿಮಾದ ದಾಖಲೆಯನ್ನು ಅಳಿಸಿಹಾಕಿದೆ.
ವಿಶ್ವಾದ್ಯಂತ ದಾಖಲೆ ಪ್ರಮಾಣದ ಸುಮಾರು 4000 ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಧೂಮ್-3 ಚಿತ್ರ, ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿತ್ತು. ಆರಂಭಿಕ 2 ದಿನಗಳಲ್ಲಿ 78 ಕೋಟಿ ರುಪಾಯಿಗಳನ್ನು ಬಾಚಿತ್ತು. ವಾರಂತ್ಯದ ವೇಳೆಗೆ ಇದರ ಗಳಿಕೆ 200 ಕೋಟಿ ರುಪಾಯಿ ತಲುಪುತ್ತದೆ ಎಂದು ಅಂದಾಜಿಸಲಾಗಿತ್ತು. ನಿರೀಕ್ಷೆಯಂತೆಯೇ ಈ ಚಿತ್ರ 233 ಕೋಟಿ ರುಪಾಯಿಗಳನ್ನು ಗಳಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
ಕಳೆದ ಶುಕ್ರವಾರ ತೆರೆಕಂಡಿದ್ದ ಧೂಮ್-3 ಚಲನಚಿತ್ರ ಭಾರತದಲ್ಲಿ ಈ ವರೆಗೂ 149.46 ಕೋಟಿ ಗಳಿಸಿದ್ದು, ವಿದೇಶಗಳಲ್ಲಿ 84.11 ಕೋಟಿ ರುಪಾಯಿಗಳನ್ನು ಗಳಿಸಿದೆ. ಒಟ್ಟಾರೆಯಾಗಿ ಭಾರತ ಸೇರಿದಂತೆ ಒಟ್ಟಾರೆಯಾಗಿ 233.57 ಕೋಟಿ ಹಣ ಗಳಿಸಿದೆ ಎಂದು ಬಾಲಿವುಡ್ ತಜ್ಞರು ಹೇಳಿದ್ದಾರೆ.
ಯಶ್ ರಾಜ್ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದ ಈ ಚಿತ್ರದ ಒಟ್ಟಾರೆ ಬಜೆಟ್ 150 ಕೋಟಿಗಳಾಗಿತ್ತು. ಆರಂಭದಲ್ಲಿ ತನ್ನ ಬಜೆಟ್ನಿಂದಲೇ ಹೆಸರು ಮಾಡಿದ್ದ ಈ ಚಿತ್ರ ಇದೀಗ ಗಳಿಕೆಯಲ್ಲೂ ಭಾರಿ ಸದ್ದು ಮಾಡುತ್ತಿರುವುದು ಚಿತ್ರ ನಿರ್ಮಾಪಕರಿಗೆ ಸಂತಸ ತಂದಿದೆ.