ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಜಿಎಸ್ಎಲ್ ವಿ' ಉಡಾವಣೆಗೆ ಸಿದ್ಧ; ಜನವರಿ 4ರಿಂದ ಕ್ಷಣಗಣನೆ ಆರಂಭ

ಇಸ್ರೋದ ನೂತನ ಉಪಗ್ರಹ ವಾಹಕ ಜಿಎಸ್ಎಲ್ ವಿ ಡಿ5 ನ ನಿರ್ಮಾಣ ಪೂರ್ಣಗೊಂಡಿದ್ದು, ಜನವರಿ 4ರಿಂದ ಉಡಾವಣೆಯ ಕ್ಷಣಗಣನೆ ಆರಂಭವಾಗಲಿದೆ.

Srinivasa Murthy VN
Updated On : 28 Dec 2013, 5:56 am

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೂತನ ಉಪಗ್ರಹ ವಾಹಕ ಜಿಎಸ್ಎಲ್ ವಿ ಡಿ5 ನ ನಿರ್ಮಾಣ ಪೂರ್ಣಗೊಂಡಿದ್ದು, ಮುಂಬರುವ ಜನವರಿ 4ರಿಂದ ವಾಹಕದ ಉಡಾವಣೆಯ ಕ್ಷಣಗಣನೆ ಆರಂಭವಾಗಲಿದೆ.

ಇಸ್ರೋ ಬತ್ತಳಿಕೆಗೆ ಶೀಘ್ರದಲ್ಲಿಯೇ ಮತ್ತೊಂದು ನೂತನ ಅಸ್ತ್ರದ ಸೇರ್ಪಡೆಯಾಗಲಿದ್ದು, ಪಿಎಸ್ಎಲ್ ವಿ ಮಾದರಿಯ ಉಡಾವಣಾ ವಾಹಕಗಳ ಯಶಸ್ಸಿನ ನಂತರ ಇದೀಗ ಜಿಎಸ್ಎಲ್ ವಿ ವಾಹಕಗಳನ್ನು ಪರಿಚಯಿಸಲಾಗುತ್ತದೆ. ಇಸ್ರೋ ತಯಾರಿಸಿರುವ ನೂತನ ಜಿಎಸ್ಎಲ್ ವಿ ಡಿ5 ಉಡಾವಣಾ ವಾಹಕದ ಉಡಾವಣೆಗೆ ಅಂತಾರಾಷ್ಟ್ರೀಯ ಉಡಾವಣಾ ಸಂಸ್ಥೆ ಹಸಿರು ನಿಶಾನೆ ತೋರಿದ್ದು, ಮುಂಬರುವ ಜನವರಿ 4 ಅಥವಾ 5 ರಂದು ಉಡಾವಣೆ ಮಾಡುವ ಸಾಧ್ಯತೆಗಳಿವೆ.

ಇಸ್ರೋ ತಯಾರಿಸಿರುವ ಈ ನೂತನ ಜಿಎಸ್ಎಲ್ ವಿ ಡಿ5 ವಾಹಕವು ಅತ್ಯಾಧುನಿಕ ಕ್ರಯೋಜನಿಕ್ ಇಂಜಿನ್ ಹೊಂದಿದ್ದು, ಇಂಧನ ಟ್ಯಾಂಕ್ ಅನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಆ ಮೂಲಕ ಪಿಎಸ್ಎಲ್ ವಿ ಮಾದರಿಗಳಲ್ಲಿ ಕಂಡುಬರುತ್ತಿದ್ದ ಇಂಧನ ಸೋರುವಿಕೆಯಂತಹ ಸಮಸ್ಯೆಗಳು ಜಿಎಸ್ಎಲ್ ವಿ ಮಾದರಿಗಳಲ್ಲಿ ಕಾಣಬರುವುದಿಲ್ಲ ಎಂದು ನಿರೀಕ್ಷಿಸಲಾಗುತ್ತಿದೆ. ಅಂತೆಯೇ ಪಿಎಸ್ಎಲ್ ವಿ ಮಾದರಿಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ನೂತನ ಉಡಾವಣಾ ವಾಹಕವನ್ನು ತಯಾರು ಮಾಡಿದ್ದು, ಜಿಎಸ್ಎಲ್ ವಿ ಮಾದರಿ ವಾಹಕಗಳು ಪಿಎಸ್ಎಲ್ವಿ ವಾಹಕಗಳಿಗಿಂತಲೂ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಅಂತಾರಾಷ್ಟ್ರೀಯ ಉಡಾವಣಾ ಸಂಸ್ಥೆಯಿಂದ ಹಸಿರು ನಿಶಾನೆ ಪಡೆದಿರುವ ಇಸ್ರೋ, ಜಿಸ್ಯಾಟ್ 14 ಉಪಗ್ರಹವನ್ನು ಇದೇ ವಾಹಕದ ಮೂಲಕ ಬಾಹ್ಯಾಕಾಶಕ್ಕೆ ರವಾನೆ ಮಾಡಲು ಸಿದ್ಧತೆ ನಡೆಸಿದೆ. ಯಾವುದೇ ಅಡಚಣೆಗಳು ಉಂಟಾಗದೇ ಇದ್ದರೆ ಮುಂಬರುವ ಜನವರಿ 4 ಅಥವಾ 5ರಂದು ಜಿಎಸ್ಎಲ್ ವಿ ಡಿ5 ವಾಹಕದ ಮೂಲಕ ಜಿಸ್ಯಾಟ್ 14 ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾಗುತ್ತದೆ.

ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಜಿಎಸ್ಎಲ್ ವಿ ಡಿ5 ಅನ್ನು ಉಡಾವಣೆ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement