ಫಾರಿನ್ ಟೂರ್ ಗೆ ಮಾರ್ಗ ಸೂಚಿ ರಚಿಸಿ: ರಾಜ್ಯಪಾಲ ಭಾರದ್ವಾಜ್
ಕರ್ನಾಟಕ ಶಾಸಕರ ವಿದೇಶಿ ಪ್ರವಾಸದ ಕುರಿತು ಸೂಕ್ತ ಮಾರ್ಗಸೂಚಿಯನ್ನು ರಚಿಸಿ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ಶಾಸಕರ ವಿದೇಶಿ ಪ್ರವಾಸದ ಕುರಿತು ಸೂಕ್ತ ಮಾರ್ಗಸೂಚಿಯನ್ನು ರಚಿಸಿ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ರಾಜ್ಯದ ಜನರ ವಿರೋಧಕ್ಕೆ ಕಾರಣವಾಗಿರುವ ಶಾಸಕರ ವಿದೇಶಿ ಪ್ರವಾಸ ವಿಚಾರವಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮತ್ತೊಮ್ಮೆ ಸರ್ಕಾರದ ವಿರುದ್ಧ ಗರಂ ಆಗಿದ್ದು, ಫಾರಿನ್ ಟೂರ್ ಗೆ ಸೂಕ್ತ ರೀತಿಯ ಮಾರ್ಗದರ್ಶಕ ಸೂಚಿಗಳನ್ನು ರಚಿಸಿ ಎಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಸೂಚನೆ ನೀಡಿದ್ದಾರೆ. ಈ ಮಾರ್ಗ ಸೂಚಿಯಲ್ಲಿ ಪ್ರವಾಸದ ಉದ್ದೇಶ, ಸ್ಥಳ ಮತ್ತು ಯಾವ ವಿಚಾರವಾಗಿ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ ಎಂಬಿತ್ಯಾದಿ ಅಂಶಗಳ ಕುರಿತು ಮಾರ್ಗದರ್ಶನ ನೀಡುವಂತೆ ರಾಜ್ಯಪಾಲರು ತಿಳಿಸಿದ್ದಾರೆ.
ಅಲ್ಲದೆ ಪ್ರವಾಸದ ಬಳಿಕ ಎಲ್ಲ ಶಾಸಕರು ತಮ್ಮ ಪ್ರವಾಸದ ಅವಧಿಯಲ್ಲಿ ತಾವು ನಡೆಸಿದ ಅಧ್ಯಯನಗಳು ಕುರಿತು ವರದಿ ನೀಡಲೇಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ರಾಜ್ಯಪಾಲರ ಸೂಚನೆ ಹಿನ್ನಲೆಯಲ್ಲಿ ಇದೀಗ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಈ ಬಗ್ಗೆ ಸಭೆ ನಡೆಸಲು ತೀರ್ಮಾನಿಸಿದೆ. ಸೋಮವಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಪಾಲ್ಗೊಳ್ಳುವ ಸಾಧ್ಯತೆ.
ಘನತೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ
ಸಿದ್ಧರಾಮಯ್ಯ ಅವರ ಸರ್ಕಾರದ ವಿರುದ್ಧ ಗರಂ ಆಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ಸರ್ಕಾರದಲ್ಲಿರುವ ಅಧಿಕಾರಿಗಳು ಮತ್ತು ಶಾಸಕರು ಮಾತನ್ನು ಕೇಳುತ್ತಿಲ್ಲ. ಅವರಿಚ್ಛೆಯಂತೆ ನಡೆಯುತ್ತಿದ್ದಾರೆ. ಶಾಸಕರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅನುಮತಿ ಪಡೆದು ಪ್ರವಾಸಕ್ಕೆ ತೆರಳುತ್ತಿದ್ದು, ಈ ವಿಚಾರದಲ್ಲಿ ತಾವು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ನನ್ನ ಮಾತಿಗೂ ಬೆಲೆ ಇಲ್ಲದಂತಾಗಿದೆ. ರಾಜ್ಯಪಾಲ ಹುದ್ಧೆಯ ಘನತೆಯನ್ನು ಉಳಿಸಿಕೊಳ್ಳಲು ತಾವು ಪರದಾಡುವಂತಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಒಟ್ಟಾರೆ ರಾಜ್ಯದ ಜನತೆ ವಿರೋಧಿಸಿದರೂ ಸರಿ ತಾವು ಮಾತ್ರ ವಿದೇಶಿ ಪ್ರವಾಸ ಮಾಡಿಯೇ ತೀರುತ್ತೇವೆ ಎಂದು ಹೊರಟಿರುವ ನಮ್ಮ ಶಾಸಕರ ವಿದೇಶಿ ಪ್ರೀತಿಗೆ ಏನ್ನೇನ್ನಬೇಕೋ ತಿಳಿಯುತ್ತಿಲ್ಲ.