ಕೆಆರ್ಎಸ್ ಅನ್ನು ನಮ್ಮ ಸುಪರ್ದಿಗೆ ಕೊಡಿ: ಜಿ. ಮಾದೇಗೌಡ
ಕಾವೇರಿ ಜಲ ವಿವಾದವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರದಿಂದ ಸಾಧ್ಯವಿಲ್ಲ ಹೀಗಾಗಿ ಕೆಆರ್ಎಸ್ ಅನ್ನು ನಮ್ಮ ಸುಪರ್ದಿಗೆ ನೀಡಿ ಎಂದು ಮಾದೇಗೌಡ ಆಗ್ರಹಿಸಿದರು.
ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯವನ್ನು ನಮ್ಮ ಸುಪರ್ದಿಗೆ ಕೊಡಿ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಆಗ್ರಹಿಸಿದ್ದಾರೆ.
ಕಾವೇರಿ ಜಲ ವಿವಾದವನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರದಿಂದ ಸಾಧ್ಯವಿಲ್ಲ ಹೀಗಾಗಿ ಕೆಆರ್ಎಸ್ ಜಲಾಶಯವನ್ನು ನಮ್ಮ ಸುಪರ್ದಿಗೆ ನೀಡಿ ಎಂದು ಮಾದೇಗೌಡ ಆಗ್ರಹಿಸಿದರು.
ಸಾಂಬಾ ಬೆಳೆಯನ್ನು ಉಳಿಸಿಕೊಳ್ಳಲು ತಮಿಳುನಾಡಿಗೆ 2 ಟಿಎಂಸಿ ನೀರನ್ನು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿನ್ನೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾದೇಗೌಡ, ನ್ಯಾಯಾಲಯಕ್ಕೆ ಸರ್ಕಾರ ಸರಿಯಾದ ದಾಖಲೆ ನೀಡಿಲ್ಲ. ಕಾವೇರಿ ಜಲ ಹಂಚಿಕೆಯಲ್ಲಿ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಯಾವುದೇ ಕಾರಣಕ್ಕೂ ತಾವು ತಮಿಳುನಾಡಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಮಾದೇಗೌಡ ಸ್ಪಷ್ಟಪಡಿಸಿದರು.
ಈ ನಡುವೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿ ವಿಚಾರವಾಗಿ ತಾವು ಮೈಸೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಫೆ.7 ರಿಂದ 14 ರವರೆಗೆ ಒಟ್ಟು 8 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಪಕ್ಷಾತೀತವಾಗಿ ಪಾದಯಾತ್ರೆ ನಡೆಯಲಿದೆ ಎಂದು ಬಿಎಸ್ವೈ ತಿಳಿಸಿದರು. ಅಲ್ಲದೆ ಕಾವೇರಿ ವಿಚಾರದಲ್ಲಿ ಯಾರಿಗೆ ಅನ್ಯಾಯವಾಗಿದೆ ಎಂದು ಅನಿಸುವುದೋ ಅವರು ತಮ್ಮೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಒಟ್ಟಾರೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ರಾಜ್ಯದ ರೈತರ ಪಾಲಿಗೆ ಗಾಯದ ಮೇಲಿನ ಬರೆಯಾಗಿ ಪರಿಣಮಿಸಿದೆ.