ದೇವರು ನನಗೆ ಪುನರ್ ಜನ್ಮ ನೀಡಿದ್ದಾನೆ: ಮಲಾಲ
ದೇವರು ನನಗೆ ಪುನರ್‌ಜನ್ಮ ನೀಡಿದ್ದಾನೆ ಎಂದು 15 ವರ್ಷದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್ ಝೈ ಹೇಳಿದ್ದಾಳೆ...
ಲಂಡನ್: ದೇವರು ನನಗೆ ಪುನರ್‌ಜನ್ಮ ನೀಡಿದ್ದಾನೆ ಎಂದು 15 ವರ್ಷದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್ ಝೈ ಹೇಳಿದ್ದಾಳೆ.
ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನಿ ಮೂಲಭೂತವಾದಿಗಳಿಂದ ಗುಂಡೇಟು ತಿಂದು ಆಸ್ಪತ್ರೆ ಪಾಲಾಗಿದ್ದ, ಬಾಲ ಹೊರಾಟಗಾರ್ತಿ ಮಲಾಲ ಇದೀಗ ಸಂಪೂರ್ಣ ಗುಣಮುಖಳಾಗಿದ್ದಾಳೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಲಾಲ, ನಾನು ಚೇತರಿಸಿಕೊಂಡಿದ್ದೇನೆ. ದೇವರು ನನಗೆ 2ನೇ ಜನ್ಮ ನೀಡಿದ್ದು, ಇದು ನನ್ನ ಪುನರ್ ಜನ್ಮ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ಹೋರಾಡುತ್ತೇನೆ. ಎಲ್ಲಾ ಬಾಲಕಿಯರಿಗೂ ಸಂಪೂರ್ಣ ಶಿಕ್ಷಣ ದೊರೆಯಬೇಕು. ಇದಕ್ಕಾಗಿ ನಾನು ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಮಲಾಲ ಹೇಳಿದ್ದಾಳೆ.
ಬಾಲಕಿಯರಿಗೆ ಶಿಕ್ಷಣ ನೀಡುವ ಕುರಿತು ಪಾಕಿಸ್ತಾನ ಸ್ವಾತ್ ಕಣಿವೆಯಲ್ಲಿ ಹೋರಾಟ ಮಾಡುತ್ತಿದ್ದ 15 ವರ್ಷದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್ ಝೈ ಮೇಲೆ ಕಳೆದ ಅಕ್ಟೋಬರ್ ನಲ್ಲಿ ತಾಲಿಬಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಶಾಲೆ ಮುಗಿಸಿ ಶಾಲಾ ವಾಹನದಲ್ಲಿ ಮನೆಗೆ ವಾಪಸಾಗುತ್ತಿದ್ದ ಮಲಾಲ ಮೇಲೆ ತಾಲಿಬಾನಿ ಉಗ್ರರು ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದರು.
ತಲೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಲಾಲಳನ್ನು ಪಾಕಿಸ್ತಾನದ ಸೈನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿಂದಾಗಿ ಆಕೆಯನ್ನು ಬರ್ಮಿಂಗ್ ಹ್ಮಾಮ್‌ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.