ಮಣಿರತ್ನಂ ಚಿತ್ರ "ಕಡಲ್' ವಿರುದ್ಧ ಕೇಸ್
ವಿಶ್ವರೂಪಂ ಚಿತ್ರದ ನಂತರ ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಕಡಲ್ ಚಿತ್ರ ಮತ್ತೊಂದು ವಿವಾದ ಹುಟ್ಟುಹಾಕಿದೆ.
ಚೆನ್ನೈ: ವಿಶ್ವರೂಪಂ ಚಿತ್ರದ ನಂತರ ಇದೀಗ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಕಡಲ್ ಚಿತ್ರ ಮತ್ತೊಂದು ವಿವಾದ ಹುಟ್ಟುಹಾಕಿದೆ.
ಬಹುಕೋಟಿ ವೆಚ್ಚದ ಕಮಲ್ ಹಾಸನ್ ನಿರ್ದೇಶನದ ವಿಶ್ವರೂಪಂ ವಿವಾದ ಕೊನೆಗಾಣುತ್ತಿದ್ದಂತೆ, ಮತ್ತೊಂದು ಪ್ರಮುಖ ಚಿತ್ರ ವಿವಾದಕ್ಕೆ ಕಾರಣವಾಗಿದೆ.
ಕಡಲ್ ಚಿತ್ರದಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿರುವ ಕ್ರೈಸ್ತ ಧರ್ಮದ ಮುಖಂಡರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲದೆ ಚಿತ್ರದಲ್ಲಿರುವ ವಿವಾದಿತ ದೃಶ್ಯವನ್ನು ತೆಗೆದುಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸಿ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕಡಲ್ ಚಿತ್ರದಲ್ಲಿ ಖ್ಯಾತ ತಮಿಳು ನಟ ಕಾರ್ತಿಕ್ ಅವರ ಮಗ ಗೌತಮ್ ಕಾರ್ತಿಕ್ ಮತ್ತು ಖ್ಯಾತ ನಟಿ ರಾಧಾ ಅವರ ಕಿರಿಯ ಪುತ್ರಿ ತುಳಿಸಿನಾಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಖ್ಯಾತ ನಟರಾದ ಅರ್ಜುನ್ ಸರ್ಜಾ, ಅರವಿಂದ್ಸ್ವಾಮಿ ಸೇರಿದಂತೆ ಹಲವು ಪುಮುಖ ನಟರು ಅಭಿನಯಿಸಿದ್ದಾರೆ.