ಬಜೆಟ್ ಬಿಜೆಪಿ ಚುನಾವಣಾ ಪ್ರಣಾಳಿಕೆಯಂತಿದೆ: ಸಿದ್ದು ಕಿಡಿ
ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಡಿಸಿದ 2013-14ನೇ ಸಾಲಿನ ಬಜೆಟ್ ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಶೆಟ್ಟರ್ ಅವರು ಮಂಡಿಸಿದ ಬಜೆಟ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶೆಟ್ಟರ್ ಅವರು ನಿರೀಕ್ಷಿಸಿದಂತೆಯೇ ಬಜೆಟ್ ಸಿದ್ದಪಡಿಸಿದ್ದಾರೆ. ಇದು ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಂತಿದೆ. ದೂರಾಲೋಚನೆಗಳಿಲ್ಲದೆ ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಸಿದ್ದಪಡಿಸಿದ್ದಾರೆ ಎಂದು ಕಿಡಿಕಾರಿದರು.
"ಸಿಎಂ ಜಗದೀಶ್ ಶೆಟ್ಟರ್ ಅವರು ಬಜೆಟ್ ಮಂಡಿಸುವ ಮಹದಾಸೆಯನ್ನು ಈಡೇರಿಸಿಕೊಂಡಿದ್ದಾರೆ. ಈ ಬಜೆಟ್ ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಂತೆ ಭಾಸವಾಗುತ್ತಿದೆ. ಗೊತ್ತು ಗುರಿ, ಭದ್ಧತೆ ಇಲ್ಲದ ಬಜೆಟ್ ಇದು. ಕೃಷಿ ಬಜೆಟ್ನಲ್ಲಿಯೂ ಯಾವುದೇ ಅಚ್ಚರಿಯ ಅಂಶಗಳಿಲ್ಲ. ಕಳೆದ ಸಾಲಿನ ಬಜೆಟ್ ಅನ್ನೇ ಮತ್ತೆ ಓದಿದ್ದಾರೆ ಅಷ್ಟೇ' ಎಂದು ಸಿದ್ದರಾಮಯ್ಯ ಹೇಳಿದರು.
ರೈತರ ದಾರಿ ತಪ್ಪಿಸಲೆಂದೇ ಈ ಬಾರಿ ಕೃಷಿ ಬಜೆಟ್ ಮಂಡಿಸಿದಂತಿದೆ. ಕಳೆದ ಬಾರಿ ಕೃಷಿ ಬಜೆಟ್ ಮಂಡಿಸಿ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ಸುಮಾರು 60 ಸಾವಿರ ಕೋಟಿ ರು.ಗಳನ್ನು ಹೊರೆ ಮಾಡಿದರು. ಕಳೆದ ಬಾರಿಯ ಕೃಷಿ ಬಜೆಟ್ನಲ್ಲಿ ಘೋಷಣೆ ಮಾಡಿದ ಅನುದಾನದಲ್ಲಿ ಶೇ.60 ರಷ್ಟನ್ನೂ ಸರ್ಕಾರ ಬಳಸಿಲ್ಲ. ಹೀಗಾಗಿ ಕೃಷಿ ಬಜೆಟ್ನ ಸಾಧನೆ ಸಂಪೂರ್ಣ ಶೂನ್ಯ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಜೆಟ್ ಕುರಿತಂತೆ ರಾಜಕೀಯ ಕ್ಷೇತ್ರದ ಗಣ್ಯರ ಅಭಿಪ್ರಾಯ:
ಬಜೆಟ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಭಾಗ್ಯಲಕ್ಷ್ಮಿ ಯೋಜನೆಯಂತಹ ಯೋಜನೆಗಳು ಇಲ್ಲ. ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ.
-ಬಿ.ಎಸ್ ಯಡಿಯೂರಪ್ಪ (ಕೆಜೆಪಿ ಅದ್ಯಕ್ಷ)
ಜನಸ್ನೇಹಿ, ಜನಹಿತ ಮತ್ತು ಜನಪರ ಬಜೆಟ್. ಈ ಬಾರಿಯ ಬಜೆಟ್ನಲ್ಲಿ ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಅಲ್ಲದೆ ರಾಜ್ಯದ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಪ್ತಚರ ಇಲಾಖೆಗೆ 2 ಕೋಟಿ ಅನುದಾನ ನೀಡಲಾಗಿದೆ.
-ಆರ್. ಅಶೋಕ್ ಉಪ ಮುಖ್ಯಮಂತ್ರಿ (ಸಾರಿಗೆ ಮತ್ತು ಗೃಹ ಇಲಾಖೆ)
ಇದೊಂದು ಜನಪರ ಬಜೆಟ್ ಅನ್ನೋದರಲ್ಲಿ ಎರಡು ಮಾತಿಲ್ಲ. ಪ್ರತಿ ಬಾರಿ ಬಜೆಟ್ ಮಂಡಿಸಿದಾಗಲೂ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತವೆ. ಈ ಬಜೆಟ್ ಅನ್ನು ಚುನಾವಣೆ ಬಜೆಟ್ ಅಂದ್ರೂ ಬೇಜಾರಿಲ್ಲ. ಜನರಿಗೆ ಒಂದಷ್ಟು ಒಳ್ಳೆ ಕೆಲಸ ಮಾಡಿ ಚುನಾವಣೆಗೆ ಹೊಗೋಣ.
-ಕೆ.ಎಸ್ ಈಶ್ವರಪ್ಪ, ಉಪಮುಖ್ಯಮಂತ್ರಿ
ಇದೊಂದು ಜನಪ್ರಿಯ ಬಜೆಟ್.
-ಅರವಿಂದ ಲಿಂಬಾವಳಿ, ಆರೋಗ್ಯ ಸಚಿವ