ಎಲ್ಲ ವಲಯಗಳಲ್ಲಿಯೂ ತಮಿಳರು ಪಾಲ್ಗೊಳ್ಳಬಹುದು: ಶ್ರೀಲಂಕಾ ಸಚಿವ
ಶ್ರೀಲಂಕಾದ ಎಲ್ಲ ತಮಿಳರು ಎಲ್ಲ ವಲಯಗಳಲ್ಲಿ ಭಾಗವಹಿಸಬಹುದು ಎಂದು ಶ್ರೀಲಂಕಾದ ಸಚಿವ ಡಬ್ಲ್ಯೂ.ಡಿ.ಜೆ. ಸೇನಾವಿರಾತನೆ ತಿಳಿಸಿದ್ದಾರೆ.
ತಿರುವನಂತಪುರ: ಶ್ರೀಲಂಕಾದ ಎಲ್ಲ ತಮಿಳರು ಎಲ್ಲ ವಲಯಗಳಲ್ಲಿ ಭಾಗವಹಿಸಬಹುದು ಎಂದು ಶ್ರೀಲಂಕಾದ ಸಚಿವ ಡಬ್ಲ್ಯೂ.ಡಿ.ಜೆ. ಸೇನಾವಿರಾತನೆ ತಿಳಿಸಿದ್ದಾರೆ.
ಶ್ರೀಲಂಕಾದ ಗೃಹ ಸಚಿವರಾದ ಸೇನಾವಿರಾತನೆ ಅವರು ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಶ್ರೀಲಂಕಾದಲ್ಲಿ ತಮಿಳರು ಮತ್ತು ಸಿಂಹಳೀಯರು ಎಂಬ ಭೇದಭಾವವಿಲ್ಲ ಎಲ್ಲರೂ ಒಗ್ಗಟ್ಟಾಗಿಯೇ ಇದ್ದಾರೆ. ಶ್ರೀಲಂಕಾದಲ್ಲಿ ತಮಿಳರು ಎಲ್ಲ ವಲಯಗಳಲ್ಲಿಯೂ ಭಾಗವಹಿಸಬಹುದು' ಎಂದು ಅವರು ತಿಳಿಸಿದರು.
'ಶ್ರೀಲಂಕಾದ ತಮಿಳು ಭಾಷಿಕರು ಹೆಚ್ಚಾಗಿರುವ ವಲಯಗಳಲ್ಲಿ ಅರ್ಥಿಕ, ಶೈಕ್ಷಣಿಕ ಅಭಿವೃದ್ದಿ ಸಾಧಿಸಲು ಸರ್ಕಾರ ಶ್ರಮಿಸುತ್ತಿದೆ. ಅದರ ಪರಿಣಾಮವಾಗಿಯೇ ಇಂದು ಶ್ರೀಲಂಕಾದ ತಮಿಳು ವಲಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆರೋಗ್ಯ, ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಸಾಕಷ್ಟು ಆಭಿವೃದ್ದಿ ಕಾಣಿಸುತ್ತಿದೆ. ಭಾರತ ಮತ್ತು ಶ್ರೀಲಂಕಾ ದೇಶಗಳು ಒಟ್ಟಾಗಿ ಎಂದಿನಂತೆ ಸೌಹಾರ್ದಯುತವಾಗಿ ಮುನ್ನಡೆಯಲಿದೆ. ಉಭಯ ದೇಶಗಳ ನಡುವಿನ ಸಂಬಂಧ ಎಂದಿನಂತೆ ಇರಲಿದೆ' ಎಂದು ಲಂಕಾದ ಗೃಹ ಸಚಿವರು ಹೇಳಿದರು.
ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ನಿನ್ನೆ ತಿರುಪತಿಗೆ ಭೇಟಿ ನೀಡಿದ್ದರು. ಈ ವೇಳೆ ರಾಜಪಕ್ಸೆ ಅವರ ಭಾರತ ಪ್ರವಾಸವನ್ನು ವಿರೋಧಿಸಿ ಮತ್ತು ಅವರು ಶ್ರೀಲಂಕಾದಲ್ಲಿ ತಮಿಳು ನಾಶಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ತಮಿಳು ಸಂಘಟನೆಗಳು ಮತ್ತು ಡಿಎಂಕೆ ಪಕ್ಷದ ಸದಸ್ಯರು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿದ್ದರು.