ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಫ್ಜಲ್‌ಗೆ ಗಲ್ಲು: 2 ದಿನಗಳ ನಂತರ ಕುಟುಂಬದ ಕೈ ಸೇರಿದ 'ಸ್ಪೀಡ್‌ಪೋಸ್ಟ್‌'

ಉಗ್ರ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಕುರಿತು ಆತನ ಕುಟುಂಬಕ್ಕೆ ಕೇಂದ್ರ ಸರ್ಕಾರ ರವಾನಿಸಿದ್ದ ಪತ್ರ 2 ದಿನಗಳ..

Srinivasa Murthy VN
Updated On : 11 Feb 2013, 6:04 am

ಶ್ರೀನಗರ: ಉಗ್ರ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಕುರಿತು ಆತನ ಕುಟುಂಬಕ್ಕೆ ಕೇಂದ್ರ ಸರ್ಕಾರ ರವಾನಿಸಿದ್ದ ಪತ್ರ 2 ದಿನಗಳ ನಂತರ ಕುಟುಂಬಸ್ಥರ ಕೈ ಸೇರಿದೆ.

ಸಂಸತ್ ಮೇಲಿನ ಉಗ್ರರ ದಾಳಿಗೆ ಸಹಾಯ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಫ್ಜಲ್ ಗುರುವಿಗೆ ಶನಿವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿತ್ತು. ಇದಕ್ಕೂ ಮುನ್ನ ಆತನಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಕುರಿತು ಆತನ ಕುಟುಂಬಕ್ಕೆ ಗುರುವಾರವೇ ಕೇಂದ್ರ ಸರ್ಕಾರ ಪತ್ರ ರವಾನಿಸಿತ್ತು. ಆದರೆ ಕೇಂದ್ರ ಸರ್ಕಾರ ರವಾನಿಸಿದ್ದ ಮಾಹಿತಿ ಪತ್ರ 2 ದಿನಗಳ ನಂತರ ಆತನ ಕುಟುಂಬಸ್ಥರ ಕೈ ಸೇರಿದೆ.

ಮೂಲಗಳ ಪ್ರಕಾರ ತಿಹಾರ್ ಜೈಲಿನ ಅಧಿಕಾರಿಗಳು ಅಫ್ಜಲ್ ಗುರುವಿನ ಕುಟುಂಬಸ್ಥರಿಗೆ ಬರೆದಿದ್ದ ಪತ್ರ ಇಂದು ಬೆಳಿಗ್ಗೆ ಆತನ ಕುಟುಂಬದವರ ಕೈ ಸೇರಿದೆ. ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಹಲವು ಘಂಟೆಗಳ ನಂತರ ಪತ್ರವನ್ನು ಸ್ಥಳೀಯ ಅಂಚೆ ಇಲಾಖೆ ತಲುಪಿಸಿದೆ.

ಇಂದು ಬೆಳ್ಳಿಗ್ಗೆ ಅಫ್ಜಲ್ ಕುಟುಂಬಸ್ಥರ ಕೈಗೆ ಪತ್ರ ದೊರೆತಿದೆ. ಆದರೆ ಮೊದಲು ಪತ್ರವನ್ನು ತೆಗೆದುಕೊಳ್ಳಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯರ ಒತ್ತಾಯದ ಮೇರೆಗೆ ಅಫ್ಜಲ್ ಗುರುವಿನ ಹಿರಿಯ ಸಹೋದರ ಇಜಾಜ್ ಗುರು ಪತ್ರವನ್ನು ತೆಗೆದುಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವ ಪುರುಷಾರ್ಥಕ್ಕಾಗಿ ಪತ್ರವನ್ನು ತೆಗೆದುಕೊಳ್ಳಬೇಕು. ಗಲ್ಲಿಗೇರಿಸುವ ಮುನ್ನ ಸುದ್ದಿ ತಿಳಿಸಿದ್ದರೆ ಅದನ್ನ ಮಾಹಿತಿ ಎಂದು ಕರೆಯುತ್ತಾರೆ. ಆದರೆ ಈಗ ಈ ಪತ್ರವನ್ನು ನಾವು ಏನೆಂದು ಭಾವಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಥಳೀಯ ಅಂಚೆ ಇಲಾಖೆಯನ್ನು ಪ್ರಶ್ನಿಸಿದಾಗ, ತಬಸಮ್ ಗುರು (ಅಫ್ಜಲ್ ಗುರು ಪತ್ನಿ) ಎಂಬ ಹೆಸರಿನ ಪತ್ರ ಶನಿವಾರ ಸಂಜೆ ತಮ್ಮ ಕಚೇರಿ ತಲುಪಿತ್ತು. ಆದರೆ ಅಂದು ಕೆಲಸದ ಅವಧಿ ಮುಗಿದಿತ್ತು. ಭಾನುವಾರ ಸಾಮಾನ್ಯ ರಜೆ. ಹೀಗಾಗಿ ಸೋಮವಾರ ಬೆಳಿಗ್ಗೆ ನಾವು ಪತ್ರವನ್ನು ತಲುಪಿಸಿದ್ದೇವೆ ಎಂದು ಸ್ಥಳೀಯ ಅಂಚೆ ಕಚೇರಿ ಅಧಿಕಾರಿಯೊಬ್ಬರು ತಿಳಿಸಿದರು.

ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪತ್ರರವಾನೆ ವ್ಯವಸ್ಥೆಯ ಬಗ್ಗೆಯೇ ತಮಗೆ ಅನುಮಾನ ಮೂಡುತ್ತಿದ್ದು, ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಕೇಂದ್ರ ತಮ್ಮ ಸ್ಪೀಡ್ ಪೋಸ್ಟ್ ಅನ್ನು ನಂಬಿಕೊಂಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿ, ಕೇಂದ್ರಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಮಾಹಿತಿ ರವಾನಿಸಿದ್ದೇವೆ ಎಂದು ವಾದಿಸುತ್ತಿದ್ದ ತಿಹಾರ್ ಜೈಲಿನ ಅಧಿಕಾರಿಗಳ ವಾದಕ್ಕೆ ಇದೀಗ ಪುಷ್ಟಿ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement