ಕಾಲ್ತುಳಿತ ಪ್ರಕರಣ: ಅಜಂ ಖಾನ್ ತಲೆದಂಡ
ಕುಂಭಮೇಳದಲ್ಲಿ ಭಾನುವಾರ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಕುಂಭಮೇಳದ ಉಸ್ತುವಾರಿ ಸಚಿವರ ತಲೆದಂಡವಾಗಿದೆ.
ಅಲಹಾಬಾದ್: ಅಲಹಾಬಾದಿನಲ್ಲಿ ನಡೆಯುತ್ತಿರುವ ಕುಂಭಮೇಳದ ವೇಳೆ ಭಾನುವಾರ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಭಮೇಳ ಉಸ್ತುವಾರಿ ಸಚಿವರ ತಲೆದಂಡವಾಗಿದೆ.
ಕುಂಭಮೇಳದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸಚಿವ ಅಜಂ ಖಾನ್ ಅವರು ಇಂದು ತಮ್ಮ ಕುಂಭಮೇಳ ಮೇಲುಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ನಿನ್ನೆ ರೇಲ್ವೇ ನಿಲ್ದಾಣದ ಪಾದಾಚಾರಿ ಮೇಲ್ಸೇತುವೆ ಕುಸಿದು ಬಿದ್ದಿತ್ತು. ಅಪಾಯದಿಂದ ತಪ್ಪಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡಿದ್ದರಿಂದ ಕಾಲ್ತುಳಿತ ಉಂಟಾಯಿತು.
ಕಾಲ್ತುಳಿತಕ್ಕೆ ಸಿಲುಕಿ 37 ಭಕ್ತಾದಿಗಳು ಸಾವನ್ನಪ್ಪಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ತನಿಖೆಗೆ ಆದೇಶಿಸಿತ್ತು. ಆದರೆ ಇಂದು ಕುಂಭಮೇಳದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸಚಿವ ಅಜಂ ಖಾನ್ ತಮ್ಮ ಮೇಲುಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ನಿನ್ನೆ ಸುಮಾರು 3 ಕೋಟಿಗೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಅಪಾರ ಪ್ರಮಾಣದಲ್ಲಿ ಜನರು ಆಗಮಿಸಿದ್ದರಿಂದ ಅವರನ್ನು ನಿಭಾಯಿಸಲು ಸಿಬ್ಬಂದಿಗಳು ಹರಸಾಹಸಪಡುವಂತಾಯಿತು ಎಂದು ಸಚಿವ ಅಜಂ ಖಾನ್ ತಿಳಿಸಿದ್ದಾರೆ.