ಕಾಲ್ತುಳಿತ ಪ್ರಕರಣ: ರೇಲ್ವೆ ಇಲಾಖೆಯಿಂದ ಪರಿಹಾರ ಘೋಷಣೆ
ಇಂದು ಅಲಹಾಬಾದಿಗೆ ಭೇಟಿ ನೀಡಿದ್ದ ಕೇಂದ್ರ ರೇಲ್ವೆ ಸಚಿವ ಪವನ್‌ಕುಮಾರ್ ಬನ್ಸಾಲ್ ಅವರು ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ರೇಲ್ವೆ ಇಲಾಖೆ ಪರಿಹಾರ ಘೋಷಿಸಿದರು.
ಅಲಹಾಬಾದ್: ಕುಂಭಮೇಳದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ರೇಲ್ವೆ ಇಲಾಖೆ ಪರಿಹಾರ ಘೋಷಿಸಿದೆ.
ಇಂದು ಅಲಹಾಬಾದ್ ಗೆ ಭೇಟಿ ನೀಡಿದ್ದ ಕೇಂದ್ರ ರೇಲ್ವೆ ಸಚಿವ ಪವನ್‌ಕುಮಾರ್ ಬನ್ಸಾಲ್ ಅವರು, ಗಾಯಾಳುಗಳನ್ನು ಸ್ವರೂಪರಾಣಿ ಆಸ್ಪತ್ರೆಯಲ್ಲಿ ಭೇಟಿಯಾದರು. ಕಾಲ್ತುಳಿತದಲ್ಲಿ ಗಾಯಗೊಂಡವರ ಸಂಬಂಧಿಕರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಲ್ತುಳಿತಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆಯ ತನಿಖೆಗೆ ರೇಲ್ವೆ ಅಡಿಷನಲ್ ಟ್ರಾಫಿಕ್ ಕಮಿಷನರ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಜನಜಂಗುಳಿ ತಗ್ಗಿದ ನಂತರ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಅಲ್ಲದೆ ಘಟನೆಯಲ್ಲಿ ಸಾವಿಗೀಡಾದ ಮತ್ತು ಗಾಯಗೊಂಡವರಿಗೆ ಪರಿಹಾರ ಘೋಷಣೆ ಮಾಡಿದ ಬನ್ಸಾಲ್ ಅವರು, ಕಾಲ್ತುಳಿತದಲ್ಲಿ ಸಾವಿಗೀಡಾದವರಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ರುಪಾಯಿಗಳ ಪರಿಹಾರ ಘೋಷಿಸಿದರು.
ನಿನ್ನೆ ಅಲಹಾಬಾದಿನ ಹರಿದ್ವಾರದಲ್ಲಿ ನಡೆದ ಮಹಾಕುಂಭ ಮೇಳದ ಶಾಹಿಸ್ನಾನದಲ್ಲಿ ಪಾಲ್ಗೊಂಡ ಕೋಟ್ಯಾಂತರ ಭಕ್ತರು ಸ್ನಾನ ಮುಗಿಸಿ ವಾಪಸಾಗಲು ರೇಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ರೈಲು ಬರುವಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ರೈಲು ಏರಲು ಒಮ್ಮೆಲೆ ಮುಗಿಬಿದ್ದರು. ಈ ಹಂತದಲ್ಲಿ ದಾರಾಗಂಜ್ ರೇಲ್ವೆ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು. ಘಟನೆಯಲ್ಲಿ 37 ಮಂದಿ ಸಾವಿಗೀಡಾಗಿ, ನೂರಾರು ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸಮೀಪದ ಸ್ವರೂಪ್ ರಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.