ಮರುಪರಿಶೀಲನಾ ಅರ್ಜಿಗಾಗಿ "ಕಾವೇರಿ' ಬಿಟ್ಟಿದ್ದೇವೆ: ಬೊಮ್ಮಾಯಿ
ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದೇವೆ ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದೇವೆ ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ರಾಜ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಹಿಂದಿನ ಹಲವು ಸರ್ಕಾರಗಳು ನೀರುಬಿಟ್ಟಿವೆ. ಕದ್ದುಮುಚ್ಚಿ ನೀರು ಬಿಟ್ಟವರಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ಹಾಗಾಗಿ ನಾವು ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ. ಕಳೆದ 2 ದಿನಗಳಿಂದ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ಸ್ ನೀರು ಹರಿದಿದೆ.
ಸುಪ್ರೀಂ ತೀರ್ಪಿಗೆ ಮರು ಪರಿಶೀಲನಾ ಅರ್ಜಿಸಲ್ಲಿಸಬೇಕೆಂದರೆ ಮೊದಲು ನಾವು ಸುಪ್ರೀಂ ಆದೇಶವನ್ನು ಪಾಲಿಸಬೇಕು. ಆಗ ಮಾತ್ರ ನಮ್ಮ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಹೀಗಾಗಿ ನಾವು ನ್ಯಾಯಾಲಯದ ಆದೇಶದಂತೆ ಮೊದಲು ನೀರು ಬಿಟ್ಟು, ಅನಂತರ ಅರ್ಜಿಸಲ್ಲಿಸುತ್ತಿದ್ದೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.