ಕೊಲ್ಕತಾ: ಕಾಲೇಜು ಚುನಾವಣೆಗೆ ಪಿಎಸ್‌ಐ ಬಲಿ
ವಿದ್ಯಾರ್ಥಿ ಸಂಘದ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನಡೆದ ಗಲಭೆಯಲ್ಲಿ ಓರ್ವ ಸಬ್‌ಇನ್ಸ್‌ಪೆಕ್ಟರ್ ನನ್ನು ಕಿಡಿಗೇಡಿಗಳು ಹೊಡೆದು ಕೊಂದಿದ್ದಾರೆ.
ಕೊಲ್ಕತಾ: ಕಾಲೇಜುವೊಂದರ ಚುನಾವಣೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಕೊಲ್ಕತಾದ ಹರಿಮೋಹನ್ ಘೋಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನಾಮಿನೇಷನ್ ಸಲ್ಲಿಸುವ ವೇಳೆ ತೃಣಮೂಲಕಾಂಗ್ರೆಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರಮಾರಾಮಾರಿ ನಡೆದಿದೆ.
ಸ್ಟೂಡೆಂಟ್ಸ್ ಯೂನಿಯನ್ ಚುನಾವಣೆಗೆ ಉಭಯ ಪಕ್ಷದ ಸದಸ್ಯರು ತಮ್ಮ-ತಮ್ಮ ಉಮೇದುವಾರಿಕೆ ಸಲ್ಲಿಸಲು ಕಾಲೇಜಿಗೆ ಆಗಮಿಸಿದ್ದಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ಗಲಭೆಗೆ ತಿರುಗಿದ್ದು, ಉಭಯ ತಂಡಗಳ ನಡುವೆ ಮಾರಾಮಾರಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆದರೆ ಅದಕ್ಕೂ ಜಗ್ಗದ ವಿದ್ಯಾರ್ಥಿಗಳು ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿದ್ದರು. ಈ ಹಂತದಲ್ಲಿ ಕೆಲ ಕಿಡಿಕೇಡಿಗಳು ಗುಂಡಿನ ದಾಳಿ ನಡೆಸಿದಾಗ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತು.
ಈ ನಡುವೆ ಗಲಭೆಯಲ್ಲಿ ಓರ್ವ ಸಬ್‌ಇನ್ಸ್‌ಪೆಕ್ಟರ್ ಅವರನ್ನು ಕಿಡಿಗೇಡಿಗಳು ಹೊಡೆದು ಕೊಂದಿದ್ದಾರೆ. ಘಟನಾ ಸ್ಥಳಕ್ಕೆ ಇದೀಗ ರ್ಯಾಪಿಡ್ ಆ್ಯಕ್ಷನ್ ಫೋರ್ಸ್(ಆರ್‌ಎಎಫ್)ನ ಯೋಧರು ಆಗಮಿಸಿದ್ದು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕಾಲೇಜು ಆವರಣದ ಸುತ್ತ 144 ಸೆಕ್ಷನ್ ಜಾರಿಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನಿಖೆಗೆ ಆದೇಶಿಸಿದ್ದು, ಕಿಡಿಗೇಡಿಗಳ ವಿರುದ್ದ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ. ಘಟನೆಯಲ್ಲಿ ಓರ್ವ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದು, ಆರು ಮಂದಿ ಪೊಲೀಸ್ ಪೇದೆಗಳು ಮತ್ತು ನಾಲ್ಕು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಇಂದು ನಡೆದ ಗಲಭೆಗೆ ಸ್ಥಳೀಯ ಗೂಂಡಾಗಳೇ ಕಾರಣ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಸೋಗಿನಲ್ಲಿ ಕಾಲೇಜು ಆವರಣ ಪ್ರವೇಶಿಸಿ, ವಿನಾಕಾರಣ ಗಲಾಟೆ ಆರಂಭಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.