ಮಾರ್ಚ್ 7ಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ
ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕ ಪ್ರಕಟವಾಗಿದೆ.
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಶ್ಚಿತವಾಗಿದ್ದು, ರಾಜ್ಯ ಚುನಾವಣಾ ಆಯೋಗ ಗುರುವಾರ ದಿನಾಂಕ ಪ್ರಕಟಿಸಿದೆ.
ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಮುಂದಿನ ಮಾರ್ಚ್ ತಿಂಗಳ ದಿನಾಂಕ 7 ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಮಠ್ ಅವರು, ಚುನಾವಣೆ ಕುರಿತು ಮಾಹಿತಿ ನೀಡಿದರು. ಒಟ್ಟು 7 ಮಹಾನಗರ ಪಾಲಿಕೆಗಳು ಸೇರಿದಂತೆ 208 ಸ್ಥಳೀಯ ಸಂಸ್ಥೆಗಳು ಮತ್ತು 93 ಪುರಸಭೆಗಳಿಗೆ 2001ರ ಜನಗಣತಿ ಪ್ರಕಾರ ಮಾರ್ಚ್ 7 ರಂದು ಚುನಾವಣೆ ನಡೆಯಲಿದ್ದು, ಅಗತ್ಯ ಬಿದ್ದರೆ ಮಾರ್ಚ್ 9 ರಂದು ಮರುಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಫೆಬ್ರವರಿ 15 ರಿಂದಲೇ ಅಂದರೆ ಇದೇ ಶುಕ್ರವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಸಂಬಂಧ ಫೆಬ್ರವರಿ 16 ರಂದು ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ಚುನಾವಣೆ ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಫೆಬ್ರವರಿ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಫೆ.25 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ಫೆ.27 ಕೊನೆಯ ದಿನವಾಗಿದೆ. ಮಾರ್ಚ್ 7ರಂದು ಚುನಾವಣೆ ನಡೆಯಲ್ಲಿದ್ದು, ಮಾರ್ಚ್ 11 ರಂದು ಮತಎಣಿಕೆ ನಡೆಯಲಿದೆ.
ಚುನಾವಣೆ ನಡೆಸುವ ಕುರಿತು ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಚುನಾವಣೆಯನ್ನು ಮುಂದೂಡುವ ಸರ್ಕಾರದ ಹುನ್ನಾರಕ್ಕೆ ನ್ಯಾಯಾಲಯ ಸೇರಿದಂತೆ ರಾಜ್ಯಪಾಲರು ತಣ್ಣೀರೆರಚಿದ್ದಾರೆ. ಇದೀಗ ಸರ್ಕಾರ ಸೇರಿದಂತೆ ಪ್ರತಿಪಕ್ಷಗಳು ಅನಿವಾರ್ಯವಾಗಿ ಚುನಾವಣೆಗೆ ಸಿದ್ದರಾಗಬೇಕಿದೆ.