ಕ್ರಿಕೆಟ್ ಸ್ಟೇಡಿಯಂ ಭೂಸ್ವಾಧೀನಕ್ಕೆ ತಡೆ
ದೇವನಹಳ್ಳಿ ಬಳಿ ಕ್ರಿಕೆಟ್ ಮೈದಾನಕ್ಕಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೆಐಎಡಿಬಿ ಕಾರ್ಯಕ್ಕೆ ಹೈಕೋರ್ಟ್ ಇಂದು ತಡೆ ನೀಡಿದೆ.
ಬೆಂಗಳೂರು: ಕೆಐಎಡಿಬಿ ವಶಪಡಿಸಿಕೊಂಡಿದ್ದ ಕ್ರಿಕೆಟ್ ಸ್ಟೇಡಿಯಂ ಭೂಸ್ವಾಧೀನಕ್ಕೆ ತಡೆ ನೀಡಲಾಗಿದೆ.
ದೇವನಹಳ್ಳಿ ಬಳಿ ಕ್ರಿಕೆಟ್ ಮೈದಾನಕ್ಕಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೆಐಎಡಿಬಿ ಕಾರ್ಯಕ್ಕೆ ಹೈಕೋರ್ಟ್ ಇಂದು ತಡೆ ನೀಡಿದೆ. ಈ ಹಿಂದೆ ರಾಜ್ಯ ಸರ್ಕಾರ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ದೇವನಹಳ್ಳಿಯಲ್ಲಿ ಸುಮಾರು 65 ಎಕರೆ ಭೂಮಿಯನ್ನು ಮೀಸಲಿಟ್ಟಿತ್ತು. ಸರ್ಕಾರ ಮೀಸಲಿಟ್ಟಿದ್ದ ಭೂಮಿಯನ್ನು ಕರ್ನಾಟಕ ಕೈಗಾರಿಕಾಪ್ರದೇಶ ಅಭಿವೃದ್ದಿ ನಿಗಮ (ಕೆಐಎಡಿಬಿ) ವಶಪಡಿಸಿಕೊಂಡಿತ್ತು. ಕೆಐಎಡಿಬಿ ಕ್ರಮವನ್ನು ಖಂಡಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇಂದು ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, ಕೆಐಎಡಿಬಿ ಭೂಸ್ವಾಧೀನಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ವಿಚಾರಣೆಯಲ್ಲಿ ವಾದ ಮಂಡಿಸಿದ ಅರ್ಜಿದಾರರು ಕೆಐಎಡಿಬಿ ಕೇವಲ ಕೈಗಾರಿಕಾ ಅಭಿವ್ಛದ್ದಿಗಾಗಿ ಮಾತ್ರ ಭೂಸ್ವಾಧೀನ ಪಡಿಸಿಕೊಳ್ಳಬೇಕು. ಆದರೆ ಕ್ರಿಕೆಟ್ ಉದ್ಯಮವಲ್ಲ, ಸಾಮಾಜಿಕ ಉದ್ದೇಶವೂ ಅಲ್ಲ ಹೀಗಿರುವಾಗ ಕ್ರಿಕೆಟ್ ಸ್ಟೇಡಿಯಂಗಾಗಿ ಮೀಸಲಿಟ್ಟಿರುವ ಜಾಗವನ್ನು ಕೆಐಎಡಿಬಿ ವಶಪಡಿಸಿಕೊಳ್ಳುವಂತಿಲ್ಲ ಎಂದು ತಮ್ಮ ವಾದವನ್ನು ಮಂಡಿಸಿದರು.
ಉಭಯ ವಕೀಲರ ವಾದ ಆಲಿಸಿದ ಹೈಕೋರ್ಟ್ ಭೂಸ್ವಾಧೀನಕ್ಕೆ ತಾತ್ಕಾಲಿಕ ತಡೆ ನೀಡಿದೆ.