ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಷ್ಯಾಕ್ಕೆ ಅಪ್ಪಳಿಸಿದ ಬೃಹತ್ ಉಲ್ಕೆಗಳು: 500 ಕ್ಕೂ ಅಧಿಕ ಮಂದಿಗೆ ಗಾಯ

ಇಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಿದ್ದು, ಅದರ ಪರಿಣಾಮವಾಗಿ ರಷ್ಯಾದಲ್ಲಿ ಉಲ್ಕೆಗಳು ಭೂಮಿಗೆ ಅಪ್ಪಳಿಸಿವೆ.

Srinivasa Murthy VN
Updated On : 15 Feb 2013, 4:44 am

ಮಾಸ್ಕೋ: ಕ್ಷುದ್ರಗ್ರಹದ ಬೃಹತ್ ಉಲ್ಕೆಗಳು ರಷ್ಯಾಕ್ಕೆ ಅಪ್ಪಳಿಸಿದ್ದು, ಸ್ಫೋಟದ ರಭಸಕ್ಕೆ ಸುಮಾರು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಿದ್ದು, ಅದರ ಪರಿಣಾಮವಾಗಿ ರಷ್ಯಾದಲ್ಲಿ ಉಲ್ಕೆಗಳು ಭೂಮಿಗೆ ಅಪ್ಪಳಿಸಿವೆ. ಕ್ಷುದ್ರಗ್ರಹದ ತುಣುಕುಗಳು ರಷ್ಯಾದ ಉರುಲ್ ಪರ್ವತಕ್ಕೆ ಅಪ್ಪಳಿಸಿವೆ. ಉಲ್ಕೆಗಳು ಅಪ್ಪಳಿಸಿದ ರಭಸಕ್ಕೆ ಪರ್ವತದ ಬೃಹತ್ ಬಂಡೆಯೊಂದು ಸಿಡಿದು ಚೂರಾಗಿದೆ. ಅಲ್ಲದೆ ಸ್ಫೋಟದಲ್ಲಿ ಪರ್ವತ ಪ್ರದೇಶದ ಸಮೀಪದ ಹಳ್ಳಿಗಳಲ್ಲಿನ ಸುಮಾರು 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರ ಪೈಕಿ 100 ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಷ್ಯಾದ ಸೈನಿಕರು ಧಾವಿಸಿದ್ದಾರೆ. ಅಲ್ಲದೆ ಸ್ಫೋಟದ ರಭಸಕ್ಕೆ ಉರುಲ್ ಪರ್ವತದ ಸಮೀಪದ ನಗರಗಳ ಬೃಹತ್ ಕಟ್ಟಡಗಳು ನಡುಗಿವೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಎಲ್ಲರೂ ಇದೊಂದು ವೈಮಾನಿಕ ಅಪಘಾತವೆಂದು ಭಾವಿಸಿದ್ದರು. ಆದರೆ ಉಲ್ಕೆಗಳು ಪರ್ವತಕ್ಕೆ ಅಪ್ಪಳಿಸಿದ ರಭಸದಿಂದಾಗಿ ಅದೊಂದು ಉಲ್ಕಾಪಾತ ಸ್ಫೋಟವೆಂದು ತಿಳಿದು ಬಂದಿದೆ.

ಘಟನೆ ಕುರಿತಂತೆ ನಿನ್ನೆಯೇ ಎಚ್ಚರಿಕೆ ರವಾನಿಸಿದ್ದ ನಾಸಾ ವಿಜ್ಞಾನಿಗಳು, ಕ್ಷುದ್ರಗ್ರಹವೊಂದು ಭೂಮಿಯ ಅತ್ಯಂತ ಸಮೀಪಕ್ಕೆ ಬರಲಿದೆ ಎಂದು ಹೇಳಿದ್ದರು. ಅದರಂತೆ ಇಂದು ಕ್ಷುದ್ರಗ್ರಹವೊಂದು ಭೂಮಿಯ ಅತ್ಯಂತ ಸಮೀಪ ಅಂದರೆ ಸುಮಾರು 2.700 ಕಿಮೀಗಳಷ್ಟು ಹತ್ತಿರದಲ್ಲಿ ಹಾದುಹೊಗಿದೆ. ಇದರ ಪರಿಣಾಮವಾಗಿಯೇ ರಷ್ಯಾದ ಉರುಲ್ ಪರ್ವತಕ್ಕೆ ಉಲ್ಕೆಗಳು ಅಪ್ಪಳಿಸಿವೆ. ಉಲ್ಕಾಪಾತದಿಂದಾಗಿ ರಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ-ಪಾಸ್ತಿಗಳ ನಷ್ಟವಾಗಿದೆ.

ಭೂಮಿಯ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಿದೆ. ಹೀಗೆ ಹಾದುಹೋದ ಕ್ಷುದ್ರಗ್ರಹವನ್ನು ವಿಜ್ಞಾನಿಗಳು '2012 ಡಿಎ14' ಎಂದು ಹೆಸರಿಸಿದ್ದಾರೆ. ಇಂದು ಬೆಳಿಗ್ಗೆ ರಷ್ಯಾಗೆ ಅಪ್ಪಳಿಸಿದ ಉಲ್ಕೆಯನ್ನು '2012ಡಿಎ14' ಕ್ಷುದ್ರಗ್ರಹದ ಅತ್ಯಂತ ಚಿಕ್ಕ ಭಾಗ ಎಂದು ಗುರುತಿಸಲಾಗಿದೆ. '2012 ಡಿಎ14' ಕ್ಷುದ್ರಗ್ರಹವು ಫುಟ್‌ಬಾಲ್ ಮೈದಾನದ ಅರ್ಧ ಭಾಗದಷ್ಟಿದ್ದು, ಇದು ಸೆಕೆಂಡಿಗೆ ಸುಮಾರು 7.8 ಕಿ.ಮೀ ದೂರ ಕ್ರಮಿಸುತ್ತದೆ. ಭೂಮಿಯ ಕಕ್ಷೆಯಲ್ಲಿ ಇದು 27 ಸಾವಿರದ 700 ಕಿ.ಮೀ ಕ್ರಮಿಸುತ್ತದೆ.

ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕುವ ಯಾವುದೇ ಆಕಾಶಕಾಯ ಬೆಂಕಿ ಉಂಡೆಯಾಗಿ ಮಾರ್ಪಟ್ಟು, ಅಲ್ಲಿಯೇ ಉರಿದು ಹೋಗುತ್ತದೆ. ಹೀಗೆ ಉರುಯುತ್ತಿರುವಾಗಲೇ ರಷ್ಯಾದಲ್ಲಿ ಉಲ್ಕೆಗಳು ಅಪ್ಪಳಿಸಿವೆ. ವಿಜ್ಞಾನಿಗಳ ಪ್ರಕಾರ ಇದು ತುಂಬಾ ಸಣ್ಣ ಉಲ್ಕಾಪಾತವಷ್ಟೇ. ಆದರೆ ಇದು ಬೀರುವ ಪರಿಣಾಮ ಮಾತ್ರ ಅಗಾಧವಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement