ಜೈಲಿನಿಂದ ಒವೈಸಿ ಬಿಡುಗಡೆ
ಪ್ರಚೋದನಕಾರಿ ಭಾಷಣ ಮಾಡಿ ಪೊಲೀಸರ ಬಂಧನದಲ್ಲಿದ್ದ, ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಹೈದರಾಬಾದ್: ಪ್ರಚೋದನಕಾರಿ ಭಾಷಣ ಮಾಡಿ ಪೊಲೀಸರ ಬಂಧನದಲ್ಲಿದ್ದ, ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿಯನ್ನು ಇಂದು ಬಿಡುಗಡೆ ಮಾಡಲಾಗಿದೆ.
ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಭಾಷಣ ಮಾಡಿ ಪೊಲೀಸ್ ಬಂಧನಕ್ಕೊಳಪಟ್ಟಿದ್ದ ಒವೈಸಿ ಅವರನ್ನು ಇಂದು ಅದಿಲಾಬಾದ್ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಚಾರಣೆ ನಡೆಸಿದ್ದ ಅದಿಲಾಬಾದ್ ನ್ಯಾಯಾಲಯ ಒವೈಸಿಗೆ ಶರತ್ತು ಬದ್ದ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ 10 ಸಾವಿರ ರುಪಾಯಿಗಳ ಭದ್ರತಾ ಠೇವಣಿ ನೀಡಿ ಜಾಮೀನು ಪಡೆಯುವಂತೆ ಆದೇಶಿಸಿತ್ತು.
ಅಂತಹುದೇ ಪ್ರಕರಣಕ್ಕೆ ಕುರಿತಂತೆ ನಿಜಾಮಾಬಾದ್ ನ್ಯಾಯಾಲಯವೂ ಜಾಮೀನು ನೀಡಿದ ಹಿನ್ನಲೆಯಲ್ಲಿ ಶಾಸಕ ಒವೈಸಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ಆದರೆ ಶಾಸಕ ಒವೈಸಿಗೆ ದೊರೆತಿರುವ ಜಾಮೀನು ಕೇವಲ ಎರಡು ಪ್ರಕರಣಗಳಿಗೆ ಮಾತ್ರ. ಇನ್ನುಳಿದ ಹಲವು ಪ್ರಕರಣಗಳ ವಿಚಾರಣೆ ಕುರಿತಂತೆ ಒವೈಸಿಯನ್ನು ಪೊಲೀಸರು ಮತ್ತೆ ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.