ಕೆಮರೂನ್ ಮೂಲಕ ಇಟಲಿ ಮೇಲೆ ಒತ್ತಡ
ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ದೇಶದ ಮೇಲೆ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಮೂಲಕ ಒತ್ತಡ ಹೇರಲು ಭಾರತ ನಿರ್ಧರಿಸಿದೆ.
ನವದೆಹಲಿ: ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ದೇಶದ ಮೇಲೆ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಮೂಲಕ ಒತ್ತಡ ಹೇರಲು ಭಾರತ ನಿರ್ಧರಿಸಿದೆ.
ಮೂರು ದಿನಗಳ ಪ್ರವಾಸ ನಿಮಿತ್ತ ನಾಳೆ ನವದೆಹಲಿಗೆ ಆಗಮಿಸಲಿರುವ ಬ್ರಿಟನ್ ಪ್ರಧಾನಿ ಕೆಮರೂನ್ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ವೇಳೆ ಕಾಪ್ಟರ್ ಖರೀದಿ ಹಗರಣ ಕುರಿತು ಭಾರತಕ್ಕೆ ದಾಖಲೆ ನೀಡುವಂತೆ ಇಟಲಿ ಮೇಲೆ ಪ್ರಭಾವ ಬೀರಲು ಕೆಮರೂನ್ ಅವರ ಬಳಿ ಮನವಿ ಮಾಡಲು ಭಾರತ ನಿರ್ಧರಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ದಾಖಲೆ ವಿನಿಮಯ ಮಾಡುವಂತೆ ಭಾರತ ಮಾಡಿದ್ದ ಮನವಿಯನ್ನು ನಿನ್ನೆ ಇಟಲಿ ನ್ಯಾಯಾಲಯ ತಿರಸ್ಕರಿಸಿತ್ತು. ಅಲ್ಲದೆ ಇಂದು ಬೆಳ್ಳಿಗ್ಗೆ ಭಾರತದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಮತ್ತು ರಕ್ಷಣಾ ಸಚಿವಾಲಯದ ಒಂದು ತಂಡಗಳು ದಾಖಲೆ ಸಂಗ್ರಹಕ್ಕಾಗಿ ಇಟಲಿಗೆ ತೆರಳಿವೆ. ದಾಖಲೆ ವಿನಿಮಯಕ್ಕೆ ಸ್ವತಃ ಇಟಲಿ ನ್ಯಾಯಾಲಯವೇ ನಕಾರ ವ್ಯಕ್ತಪಡಿಸಿರುವುದರಿಂದ ಇಟಲಿಯ ತನಿಖಾಧಿಕಾರಿಗಳು ದಾಖಲೆ ವಿನಿಮಯ ಮಾಡುತ್ತಾರೆಯೇ? ಎಂಬ ಭಯ ಭಾರತಕ್ಕೆ ಮೂಡಿದೆ.
ಹೀಗಾಗಿಯೇ ನಾಳೆ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಕೆಮರೂನ್ ಅವರ ಮೂಲಕ ಇಟಲಿ ಮೇಲೆ ಪ್ರಭಾವ ಬೀರುವ ಮೂಲಕ ದಾಖಲೆ ಸಂಗ್ರಹಿಸಲು ಭಾರತ ಮುಂದಾಗಿದೆ.
ಭಾರತದ ವಿವಿಐಪಿಗಳ ಪ್ರಯಾಣಕ್ಕಾಗಿ ಭಾರತ ಸರ್ಕಾರ ಇಟಲಿಯ ವೈಮಾನಿಕ ಸಂಸ್ಥೆ ಫಿನ್‌ಮೆಕಾನಿಕಾ ಮತ್ತು ಅಗಸ್ಟಾವೆಸ್ಟ್ ಲ್ಯಾಂಡ್ ಸಂಸ್ಥೆಗಳ ನಡುವೆ ಮಾಡಿಕೊಂಡಿದ್ದ ಒಪ್ಪಂದ ಇದೀಗ ಬಹುತೇಕ ರದ್ದುಗೊಂಡಿದೆ. ಈ ಬಗ್ಗೆ ಕೇಂದ್ರಸರ್ಕಾರ ಅಗಸ್ಟಾವೆಸ್ಟ್ ಲ್ಯಾಂಡ್ ಸಂಸ್ಥೆಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿತ್ತು. ಅಲ್ಲದೆ ನಾವು ನಿಮ್ಮೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನೇಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿತ್ತು.
ಈ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಸ್ಥೆಯ ವಕ್ತಾರರು, ಯಾವುದೇ ಕಾರಣಕ್ಕೂ ನಾವು ಭಾರತದೊಂದಿಗಿನ ಒಪ್ಪಂದ ರದ್ದಾಗಲು ಬಿಡುವುದಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ತನಿಖಾಧಿಕಾರಿಗಳು ಈಗಾಗಲೇ ಓರ್ಸಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಎಲ್ಲ ಮಾಹಿತಿಗಳು ಲಭ್ಯವಾಗಲಿದೆ. ಭಾರತದ ನೊಟಿಸ್‌ಗೆ ನಾವು ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ವಿವಿಐಪಿ ಕಾಪ್ಟರ್ ಹಗರಣ ತನಿಖಾ ಹಂತದಲ್ಲಿಯೇ ದಿನಕ್ಕೊಂದು ತಿರುವು ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.