ನವದೆಹಲಿ: ಯುವ ಜನತೆ ದೇಶದ ಸಂಪತ್ತು. ಯುವಕರಿಗಾಗಿ ಕಳೆದ 10 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದಾರೆ.
ಇಂದಿನಿಂದ ಲೋಕಸಭೆಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಈ ವೇಳೆ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಣಬ್ ಮುಖರ್ಜಿ, ಪ್ರಸ್ತುತ ಆರ್ಥಿಕ ಸ್ಥಿತಿ ಆತಂಕ ಸೃಷ್ಟಿಸುತ್ತಿದೆ. ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ ಮತ್ತು ಆರ್ಥಿಕ ಹಣದುಬ್ಬರ ತಡೆಗೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಅಧಿವೇಶನ ಫಲಪ್ರದವಾಗಿರುತ್ತದೆ ಎಂಬ ವಿಶ್ವಾಸವಿದೆ ಮತ್ತು ಇದೇ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಸೇರಿದಂತೆ ಹಲವು ಮಸೂದೆಗಳ ಅಂಗೀಕಾರಕ್ಕೆ ನಿರ್ಧರಿಸಲಾಗಿದೆ ಎಂದು ಪ್ರಣಬ್ ತಿಳಿಸಿದರು.
ಹೂಡಿಕೆ ಸೇರಿದಂತೆ ಎಲ್ಲಾ ವಲಯಗಳಿಗೆ ಆದ್ಯತೆ ನೀಡಲಾಗಿದೆ ಮತ್ತು ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ ತುಂಬಲು ಬೇಕಾದ ಎಲ್ಲ ಕ್ರಮಗಳನ್ನು ನನ್ನ ಸರ್ಕಾರ ತೆಗೆದುಕೊಂಡಿದ್ದು, ಸಿನಿಮಾ ಮ್ಯೂಸಿಯಂ ಸ್ಥಾನಪೆಗೆ ಸರ್ಕಾರ ನಿರ್ಧರಿಸಿದೆ ಎಂದರು.
ಮಹಿಳೆಯರ ಭದ್ರತೆ ನಮ್ಮೆಲ್ಲರ ಹೊಣೆ. ಮಹಿಳೆಯರ ಭದ್ರತಾ ಕಾಯ್ದೆ ಜಾರಿಗೆ ಸರ್ಕಾರ ಬದ್ಧವಾಗಿದೆ ಹಾಗೂ ಎಲ್ಲ ಪೊಲೀಸ್ ಠಾಣೆಗಳ ಸುಧಾರಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಣಬ್ ತಿಳಿಸಿದರು.