ಸ್ಫೋಟದ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು: ಶಿಂಧೆ
ಹೈದರಾಬಾದಿನಲ್ಲಿ ಸಂಭವಿಸಿರುವ ಸ್ಫೋಟದ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ರವಾನಿಸಿತ್ತು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ನವದೆಹಲಿ: ಹೈದರಾಬಾದಿನಲ್ಲಿ ಸಂಭವಿಸಿರುವ ಸ್ಫೋಟದ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ರವಾನಿಸಿತ್ತು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ಹೈದರಾಬಾದ್‌ನ ದಿಲ್ ಸುಖ್ ನಗರದಲ್ಲಿ ಇಂದು ಸಂಜೆ ನಡೆದ ಸರಣಿ ಸ್ಪೋಟದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿಂಧೆ, ದಾಳಿ ಕುರಿತು ಈ ಹಿಂದೆಯೇ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿತ್ತು. ಸತತ 2 ದಿನಗಳಿಂದಲೂ ಗೃಹ ಇಲಾಖೆ ಆಂದ್ರ ಪ್ರದೇಶ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸಲು ಸೂಚಿಸಿದ್ದೆವು. ಆದರೂ ಕೂಡ ದುರ್ಘಟನೆ ನಡೆದಿರುವುದು ವಿಷಾದನೀಯ ಎಂದು ತಿಳಿಸಿದರು.
ಸ್ಪೋಟದಲ್ಲಿ ಈವರೆಗೆ 22 ಮಂದಿ ಸಾವಿಗೀಡಾಗಿದ್ದು, 60 ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಉಸ್ಮಾನಿಯಾ ವೈಧ್ಯಕೀಯ ಕೇಂದ್ರ, ಯಶೋದಾ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದ್ದು, ಘಟನಾ ಸ್ಥಳವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.