ಶ್ರೀಲಂಕಾ ಕುರಿತ ಭಾರತದ ಧೋರಣೆ ಬದಲಾಗಬೇಕು: ಮೈತ್ರೇಯನ್
ನವದೆಹಲಿ: ಶ್ರೀಲಂಕಾ ದೇಶದ ಕುರಿತು ಭಾರತ ಹೊಂದಿರುವ ತನ್ನ ಧೋರಣೆಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಎಐಎಡಿಎಂಕೆ ರಾಜ್ಯಸಭೆ ಸದಸ್ಯ ಮೈತ್ರೇಯನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಮೈತ್ರೇಯನ್ ಅವರು, ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು. ಶ್ರೀಲಂಕಾ ತಮಿಳರ ರಕ್ಷಣೆಗೆ ಭಾರತ ವಿದೇಶಾಂಗ ಸಚಿವಾಲಯ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
"ತಮಿಳರನ್ನು ಶತ್ರುಗಳಂತೆ ಭಾವಿಸಿರುವ ಶ್ರೀಲಂಕಾ ದೇಶವನ್ನು, ತಮಿಳರು ಶತ್ರುರಾಷ್ಟ್ರವಾಗಿಯೇ ಪರಿಗಣಿಸುತ್ತಾರೆ. ಎಲ್‌ಟಿಟಿಇ ವಿರುದ್ಧದ ಯುದ್ಧದ ಸಮಯದಲ್ಲಿ ಶ್ರೀಲಂಕಾ ಸೇನೆ ತಮಿಳರ ಮೇಲೆ ನಡೆಸಿದ್ದ ದೌರ್ಜನ್ಯಕ್ಕೆ ನ್ಯಾಯ ದೊರೆಯಬೇಕಿದೆ. ಹೀಗಾಗಿ ಭಾರತದ ಲಂಕಾ ಮೇಲಿನ ಧೋರಣೆ ಬದಲಾಗಬೇಕಿದೆ ಎಂದು ಅವರು ಹೇಳಿದರು.
ಅಲ್ಲದೆ 2009ರ ಮೇ ತಿಂಗಳಿನಲ್ಲಿ ಎಲ್‌ಟಿಟಿಇ ವಿರುದ್ಧದ ಯುದ್ಧದಲ್ಲಿ ಶ್ರೀಲಂಕಾ ಸೇನೆ ನಡೆದುಕೊಂಡ ರೀತಿ ಮತ್ತು ತಮಿಳರ ಮೇಲಿನ ದೌರ್ಜನ್ಯಗಳ ಕುರಿತು ಚಾನೆಲ್ 4 ತಯಾರಿಸಿರುವ ಸಾಕ್ಷ್ಯಚಿತ್ರವನ್ನು ಮಾನವಹಕ್ಕುಗಳ ಆಯೋಗ ವೀಕ್ಷಿಸಿದೆ ಎಂದು ಮೈತ್ರೇಯನ್ ಸಭೆಗೆ ತಿಳಿಸಿದರು. ಅಂತೆಯೇ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಪುತ್ರನನ್ನು ಲಂಕಾ ಸೇನೆ ಕೊಂದುಹಾಕಿರುವ ಛಾಯಾಚಿತ್ರಗಳನ್ನೂ ಸಹ ಅವರು ರಾಜ್ಯಸಭೆಗೆ ನೀಡಿ, ಲಂಕಾ ಸೇನೆಯ "ಯುದ್ಧ ಅಪರಾಧ' ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
"ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನ್ಯಾಯಾಂಗ ವ್ಯವಸ್ಥೆಯೇ ಇಲ್ಲದ ದೇಶ, ತನ್ನ ವಿರುದ್ಧವೇ ತನಿಖೆ ನಡೆಸಿಕೊಳ್ಳಲು ಹೇಗೆ ಸಾಧ್ಯ. ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಲು ಹೇಗೆ ಸಾಧ್ಯ? ಎಂದು ಮೈತ್ರೇಯನ್ ಪ್ರಶ್ನಿಸಿದರು.