ಟಿಎಂಸಿ ಕಾರ್ಯಕರ್ತನ ಸಾವು: ಪೊಲೀಸ್ ಠಾಣೆ ಮೇಲೆ ದಾಳಿ
ಕೋಲ್ಕತಾ: ಪೊಲೀಸ್ ವಶದಲ್ಲಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನು ಸಾವನ್ನಪ್ಪಿದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯ ಮೇಲೆ ಜನರು ಕಲ್ಲು ತೂರಾಟ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ನಗರದ ಹೊರವಲಯದಲ್ಲಿರುವ ಧನಿಯಾಖಲಿ ಪೊಲೀಸ್ ಠಾಣೆ ಮೇಲೆ ಜನರು ಕಲ್ಲು, ಇಟ್ಟಿಗೆಗಳನ್ನು ತೂರಿ ದಾಳಿ ಮಾಡಿದ್ದಾರೆ. ಜನರ ದಾಳಿಯಿಂದಾಗಿ ಠಾಣೆಯಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧನಿಯಾಖಲಿ ಪೊಲೀಸರು ಕಳೆದ ಶುಕ್ರವಾರ ರಾತ್ರಿ ಖಾಜಿ ನಾಸಿರುದ್ದೀನ್ ಎಂಬ ಯುವಕನನ್ನು ಬಂಧಿಸಿದ್ದರು. ಪ್ರಕರಣದ ಸಂಬಂಧ ವಿಚಾರಣೆಯಲ್ಲಿ ಆತನನ್ನು ಪೊಲೀಸರು ಥಳಿಸಿದ್ದರು. ಪೊಲೀಸರ ಥಳಿತ ತಾಳಲಾರದೆ ಆತ ಪ್ರಜ್ಞಾಹೀನನಾಗಿದ್ದ. ತಕ್ಷಣವೇ ಪೊಲೀಸರ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿದಾಗ ಆತ ಮೃತಪಟ್ಟಿರುವುದು ಧೃಢಪಟ್ಟಿತು.
ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿದ್ದ ಸ್ಥಳೀಯರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ಯುವಕನ ಸಾವಿಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾ ನಿರತ ಸ್ಥಳೀಯರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಪೊಲೀಸರ ಈ ಕೃತ್ಯವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಮಾನವಹಕ್ಕು ಆಯೋಗ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧನಿಯಾಖಲಿ ಪೊಲೀಸ್ ಠಾಣೆಯ ಎಸ್ಐ ಅನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತನ್ಮಯ್ರಾಯ್ ಚೌದರಿ ತಿಳಿಸಿದ್ದಾರೆ. ಖಾಜಿ ನಸೀರುದ್ದೀನ್ನ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಪೊಲೀಸರ ಹೊಡೆತದಿಂದಾಗಿಯೇ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ ಪ್ರಕರಣಕ್ಕೆ ಸ್ಥಳೀಯ ರಾಜಕಾರಣಿಗಳು ರಾಜಕೀಯ ಬಣ್ಣ ಬಳಿಯುತ್ತಿದ್ದು, ಪ್ರಕರಣವನ್ನು ಬೇರೆ ಹಾದಿಯತ್ತ ವಾಲುವಂತೆ ಮಾಡುತ್ತಿದ್ದಾರೆ.
ಯುವಕನ ಸಾವಿನ ಕುರಿತು ಮಾತನಾಡಿರುವ ಸ್ಥಳೀಯ ಟಿಎಂಸಿ ಶಾಸಕ ಅಶೀಮಪಟ್ರಾ, "ಯುವಕನಿಗೆ ಖಾಯಿಲೆ ಇತ್ತು. ಹೀಗಾಗಿ ಆತ ಮೃತಪಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರಾದ ಅಬ್ದುಲ್ ಮನ್ನನ್ ಅವರು ಮೃತ ಯುವಕ ಟಿಎಂಸಿ ತೊರೆದು ಬೇರೆ ಪಕ್ಷವನ್ನು ಸೇರಬೇಕೆಂದು ಬಯಸಿದ್ದ. ಆದರೆ ಟಿಎಂಸಿ ನಾಯಕರು ಪೊಲೀಸರೊಂದಿಗೆ ಶಾಮೀಲಾಗಿ ಆತನನ್ನು ಕೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.