ತಿಂಗಳ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ದೇವೆಗೌಡ
ಹಾಸನ: ಜನವರಿ ತಿಂಗಳ ಅಂತ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಪಕ್ಷದ ವರಿಷ್ಠ ಹಾಗು ಮಾಜಿ ಪ್ರಧಾನಿ ಎಚ್‌ಡಿ ದೇವೆಗೌಡ ಅವರು ಹೇಳಿದ್ದಾರೆ.
ಹಾಸನ ಜಿಲ್ಲೆಯ ಹೆತ್ತೂರಿನಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜನವರಿ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
"ಚುನಾವಣೆಗೆ ತಮ್ಮ ಪಕ್ಷ ಸರ್ವ ರೀತಿಯಲ್ಲಿಯೂ ಸಿದ್ಧವಾಗಿದೆ. ಕರ್ನಾಟಕದ ಜನತೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಆಶಿರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ. ತಾವು ಜಾತಿವಾದಿಯಲ್ಲ. ಜಾತಿ ರಾಜಕಾರಣದಲ್ಲಿ ತಮಗೆ ನಂಬಿಕೆಯೂ ಇಲ್ಲ. ನಿರ್ದಿಷ್ಟ ಜನಾಂದಗದವರಿಗೆ ಮಾತ್ರ ತಾವು ಸೀಮಿತವಾಗಿಲ್ಲ. ಎಲ್ಲಾ ಜನಾಂಗಗಳ ಪರವಾಗಿಯೂ ನಾವು ಹೋರಾಟ ಮಾಡುತ್ತಿದ್ದೇವೆ' ಎಂದು ದೇವೆಗೌಡ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷವನ್ನು ಶತಾಯಗತಾಯ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ಪಕ್ಷದ ವರಿಷ್ಠ ದೇವೆಗೌಡ ಅವರು, ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.