26/11 ರೂವಾರಿ ಹೆಡ್ಲಿ ಹಸ್ತಾಂತರಕ್ಕೆ ಭಾರತದ ಮನವಿ
26/11 ಮುಂಬೈ ದಾಳಿಯ ರೂವಾರಿ ಉಗ್ರ ಡೇವಿಡ್ ಹೆಡ್ಲಿಯನ್ನು ವಿಚಾರಣೆಗಾಗಿ ಭಾರತಕ್ಕೆ ರವಾನಿಸುವಂತೆ ಅಧಿಕಾರಿಗಳು ಅಮೆರಿಕದ ಬಳಿ ಮನವಿ ಮಾಡಿದ್ದಾರೆ.
ನವದೆಹಲಿ: 26/11 ಮುಂಬೈ ದಾಳಿಯ ರೂವಾರಿ ಉಗ್ರ ಡೇವಿಡ್ ಹೆಡ್ಲಿಯನ್ನು ವಿಚಾರಣೆಗಾಗಿ ಭಾರತಕ್ಕೆ ರವಾನಿಸುವಂತೆ ಅಧಿಕಾರಿಗಳು ಅಮೆರಿಕದ ಬಳಿ ಮನವಿ ಮಾಡಿದ್ದಾರೆ.
ಲಷ್ಕರ್ ಉಗ್ರ ನಾಯಕ ಮತ್ತು 26/11 ಮುಂಬೈ ದಾಳಿಯ ರೂವಾರಿ ಡೇವಿಡ್ ಹೆಡ್ಲಿ ಮತ್ತು ಆತನ ಸಹಚರ ತಹವ್ವುರ್ ಹುಸೇನ್ ರಾಣಾನನ್ನು ಹೆಚ್ಚಿನ ವಿಚಾರಣೆಗಾಗಿ 1ವರ್ಷಗಳ ಕಾಲ ಭಾರತದ ಸುಪರ್ದಿಗೆ ನೀಡಬೇಕು ಎಂದು ಭಾರತೀಯ ತನಿಖಾಧಿಕಾರಿಗಳು ಅಮೆರಿಕದ ತನಿಖಾಧಿಕಾರಿಗಳ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇ20 ರಿಂದ 22ರವರೆಗೆ ವಾಷಿಂಗ್ಟನ್ನಲ್ಲಿ ನಡೆದ ಇಂಡೋ-ಅಮೆರಿಕ ಜಂಟಿ ಭದ್ರತಾ ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ಅಧಿಕಾರಿಗಳು, ತಮ್ಮ ಮನವಿಯನ್ನು ಅಮೆರಿಕದ ತನಿಖಾಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಮನವಿಗೆ ಅಮೆರಿಕದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೆಡ್ಲಿ ಹಸ್ತಾಂತರಕ್ಕಾಗಿ ಭಾರತ 2ನೇ ಬಾರಿ ಅಮೆರಿಕದ ಬಳಿ ಮನವಿ ಮಾಡಿದ್ದು, ಈ ಹಿಂದೆ 2008ರಲ್ಲಿ ಡೇವಿಡ್ ಹೆಡ್ಲಿ ಮತ್ತು ಹುಸೇನ್ ರಾಣಾ ಹಸ್ತಾಂತರಕ್ಕೆ ಮನವಿ ಮಾಡಿತ್ತು. ಅಂದು ಹೆಡ್ಲಿ ಹಸ್ತಾಂತರಕ್ಕೆ ನಿರಾಕರಣೆ ವ್ಯಕ್ತಪಡಿಸಿದ್ದ ಅಮೆರಿಕ, ಈ ಬಾರಿ ಭಾರತದ ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದೆ. ಆದರೆ ಹೆಡ್ಲಿಯನ್ನು ಅಮೆರಿಕದ ನ್ಯಾಯಾಲಯ ವಿಚಾರಣೆಗೊಳಪಡಿಸಿದ್ದು, ನ್ಯಾಯಾಲಯದ ತೀರ್ಮಾನವೇ ಈ ವಿಚಾರದಲ್ಲಿ ಅಂತಿಮವಾಗಿರುತ್ತದೆ.
ಹೀಗಾಗಿ ಹೆಡ್ಲಿ ಹಸ್ತಾಂತರಕ್ಕೆ ಅಮೆರಿಕದ ತನಿಖಾಧಿಕಾರಿಗಳು ಒಪ್ಪಿದರೂ ನ್ಯಾಯಾಲದ ಒಪ್ಪಿಗೆ ದೊರೆಯುವುದು ಕಷ್ಟ ಎಂದು ಹಿರಿಯ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡೆನ್ಮಾರ್ಕ್ನಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಹೆಡ್ಲಿ ಪ್ರಮುಖ ಆರೋಪಿಯಾಗಿದ್ದು, ಆತನ ವಿಚಾರಣೆ ಇಂದಿಗೂ ಪ್ರಗತಿಯಲ್ಲಿದೆ. ಹೀಗಾಗಿ ಹೆಡ್ಲಿ ಹಸ್ತಾಂತರ ವಿಚಾರದಲ್ಲಿ ಭಾರತಕ್ಕೆ ಮತ್ತೊಮ್ಮೆ ಹಿನ್ನಡೆಯಾಗುವ ಸಾಧ್ಯತೆ ಇದೆ.