ಇದೇ ತಿಂಗಳಲ್ಲಿ 'ತೆಲಂಗಾಣ' ನಿರ್ಧಾರ: ಆಜಾದ್
ಜೂನ್ ನಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತು 'ಕೇಂದ್ರ' ನಿರ್ಧಾರ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ..
ನವದೆಹಲಿ: ಇದೇ ಜೂನ್ ತಿಂಗಳೊಳಗೆ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಕಾಂಗ್ರೆಸ್ ಉಸ್ತುವಾರಿ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವು ವರ್ಷಗಳಿಂದ ನಡೆಯುತ್ತಿರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದ ಕುರಿತು ಕೇಂದ್ರ ಸರ್ಕಾರ ಇದೇ ಜೂನ್ ತಿಂಗಳೊಳಗಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಅಲ್ಲದೆ ನಿರ್ಧಾರ ಕೈಗೊಳ್ಳುವ ಮುನ್ನ ಆಂಧ್ರಪ್ರದೇಶದ ಉಭಯ ನಾಯಕರುಗಳನ್ನು ಕರೆದು ಚರ್ಚಿಸುವುದಾಗಿ ಅವರು ತಿಳಿಸಿದರು.
ತುಂಬಾ ಸೂಕ್ಷ್ಮ ಸಂಗತಿಯಾಗಿರುವ ತೆಲಂಗಾಣ ರಾಜ್ಯರಚನೆ ವಿವಾದದಿಂದಾಗಿ ಇತ್ತೀಚೆಗಷ್ಟೇ ಪ್ರಮುಖ ನಾಯಕ ಕೇಶವರಾವ್ ಅವರು ಸೇರಿದಂತೆ ತೆಲಂಗಾಣ ಭಾಗದ ಕಾಂಗ್ರೆಸ್ ಸಂಸದರಾದ ಜಿ.ವಿವೇಕ್ ಮತ್ತು ಎಂ.ಜಗನ್ನಾಥಂ ಎಂಬ ಮೂವರು ಸಂಸದರು ರಾಜಿನಾಮೆ ನೀಡಿದ್ದರು. ಇಂದು ಈ ಬಗ್ಗೆ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆದಿದ್ದು, ಆಂಧ್ರಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ಗುಲಾಂ ನಭಿ ಆಜಾದ್ ಪಾಲ್ಗೊಂಡಿದ್ದರು.
ನಂತರ ಸಭೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮೂವರು ಸಂಸದರ ರಾಜಿನಾಮೆ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ ಅವರು, ತೆಲಂಗಾಣ ವಿಚಾರದಲ್ಲಿ ಅವರು ತುಂಬಾ ಗಂಭೀರವಾಗಿದ್ದಾರೆ. ಹೀಗಾಗಿ ಅವರು ಆತುರಪಟ್ಟಿದ್ದಾರೆ ಎಂದು ನನಗನ್ನಿಸುತ್ತದೆ ಎಂದು ಅವರು ಹೇಳಿದರು.