ಕಳ್ಳಸಾಗಣೆ: ಲಂಡನ್ನಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳ ಶೋಧ
ಕಳ್ಳಸಾಗಣೆ ಆರೋಪದ ಮೇಲೆ ಲಂಡನ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿದೆ.
ಲಂಡನ್: ಕಳ್ಳಸಾಗಣೆ ಆರೋಪದ ಮೇಲೆ ಲಂಡನ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿದೆ.
ವಿಮಾನದಲ್ಲಿ 50 ಸಿಗರೇಟ್ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಲಂಡನ್ನಲ್ಲಿ ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಸಿಬ್ಬಂದಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿದೆ. ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಭವಿಕ್ ಷಾ ಎಂಬುವವರು ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದರು. ಅನಂತರ 5000 ಪೌಂಡ್ಸ್ಗಳನ್ನು ದಂಡವಾಗಿ ಪಾವತಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು, ಘಟನೆ ನಡಿದಿರುವುದು ನಿಜ. ಏರ್ ಇಂಡಿಯಾದ ಹಿರಿಯ ಅಧಿಕಾರಿಯಾಗಿದ್ದ ಷಾ ಅವರು ಘಟನೆಯಲ್ಲಿ ತಪ್ಪಿತಸ್ಥರಾಗಿದ್ದು, ಅವರನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಂಡನ್ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಲಂಡನ್ನಿಂದ ಮುಂಬೈಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಷಾ ಅವರು, ಲಂಡನ್ ಪೊಲೀಸರ ಕಣ್ತಪ್ಪಿಸಿ ತಮ್ಮ ಬ್ಯಾಗಿನಲ್ಲಿ 50 ಸಿಗರೇಟ್ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದರು. ವಿಮಾನ ನಿಲ್ದಾಣದ ಸಾಮಾನ್ಯ ತಪಾಸಣೆಯ ವೇಳೆ ಷಾ ಅವರ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ ಈ ಮಾಹಿತಿ ಬಹಿರಂಗಗೊಂಡಿದೆ.
ಘಟನೆ ಬಳಿಕ ಏರ್ ಇಂಡಿಯಾ ವಿಮಾನದ ಎಲ್ಲಾ ಸಿಬ್ಬಂದಿಗಳನ್ನು ಸುಮಾರು ನಾಲ್ಕು ಗಂಟೆಗಳ ಸುದೀರ್ಘ ವಿಚಾರಣೆ ನಡೆಸಲಾಗಿದೆ. ಅಲ್ಲದೆ ಲಂಡನ್ನಿಂದ ಮುಂಬೈಗೆ ಹೊರಡಬೇಕಿದ್ದ ಏರ್ಇಂಡಿಯಾ ವಿಮಾನ ಕೂಡ ನಾಲ್ಕೂವರೆ ಗಂಟೆ ತಡವಾಗಿ ಹೊರಟಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಷಾ ಅವರ ವಿದೇಶಿ ಸಿಗರೇಟ್ ಹುಚ್ಚು, ವಿದೇಶಿ ನೆಲದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ಗೊಂದಲಕ್ಕೀಡು ಮಾಡಿತ್ತು. ಅಲ್ಲದೆ ಸಿಗರೇಟ್ ಅನ್ನೂ ಬಿಡದ ಲಂಡನ್ ಪೊಲೀಸರ ಕಾರ್ಯ ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.