ಚಿಯರ್ ಲೀಡರ್ಸ್, ಪಾರ್ಟಿ ರದ್ದು: ದಾಲ್ಮಿಯಾ
ಐಪಿಎಲ್ ಪಂದ್ಯಾವಳಿಗಳಲ್ಲಿ ಚಿಯರ್ ಲೀಡರ್ಸ್ಗಳನ್ನು, ಪಾರ್ಟಿಗಳನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಹೇಳಿದ್ದಾರೆ.
ಕೊಲ್ಕತಾ: ಮುಂಬರುವ ಐಪಿಎಲ್ ಪಂದ್ಯಾವಳಿಗಳಲ್ಲಿ ಚಿಯರ್ ಲೀಡರ್ಸ್ಗಳು ಇರುವುದಿಲ್ಲ. ಹಾಗೆಯೇ ಪಂದ್ಯಗಳ ನಂತರದ ಪಾರ್ಟಿಗಳನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಹೇಳಿದ್ದಾರೆ.
ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಕೊಲ್ಕತಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗಮೋಹನ್ ದಾಲ್ಮಿಯಾ ಅವರು, ಭಾರತೀಯ ಕ್ರಿಕೆಟ್ ರಂಗಕ್ಕೆ ಇತ್ತೀಚೆಗೆ ಅಂಟಿಕೊಂಡಿರವ ಅಪವಾದವನ್ನು ತೊಳೆಯಲು ನಾವು ಪ್ರಯತ್ನಿಸುತ್ತೇವೆ. ಇದಕ್ಕಾಗಿ ಬಿಸಿಸಿಐ ನೀಲನಕ್ಷೆಯೊಂದನ್ನು ಸಿದ್ದಪಡಿಸಿದ್ದು, ಐಪಿಎಲ್ ಶುದ್ದೀಕರಣಕ್ಕಾಗಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
'ಮುಂಬರುವ ಐಪಿಎಲ್ ಪಂದ್ಯಾವಳಿಗಳಲ್ಲಿ ಇನ್ನು ಮುಂದೆ ಚಿಯರ್ ಲೀಡರ್ಸ್ಗಳು ಇರುವುದಿಲ್ಲ. ಹಾಗೆಯೇ ಪಂದ್ಯಗಳ ನಂತರ ನಡೆಯುವ ಪಾರ್ಟಿಗಳನ್ನು ಕೂಡ ರದ್ದು ಮಾಡಲಾಗಿದೆ. ಅಲ್ಲದೆ ಪ್ರತೀ ಪಂದ್ಯಗಳ ನಡುವೆ ಉಭಯ ತಂಡಗಳಿಗೆ ನೀಡಲಾಗುವ 'ಸ್ಟ್ರಾಟೆಜಿಕ್ ಟೈಮ್ ಔಟ್' ಅನ್ನು ರದ್ದು ಮಾಡಲಾಗಿದೆ ಎಂದು ದಾಲ್ಮಿಯಾ ತಿಳಿಸಿದರು. ಬಿಸಿಸಿಐ ಸದಸ್ಯರ ರಾಜಿನಾಮೆ ವಿಚಾರದ ಬಗ್ಗೆ ಮಾತನಾಡಿದ ಅವರು, 'ಇಬ್ಬರೂ ಸದಸ್ಯರ ರಾಜಿನಾಮೆ ಪತ್ರಗಳು ನಮ್ಮ ಕೈ ಸೇರಿಲ್ಲ. ಆದರೆ ಸಂಜಯ್ ಜಗದಾಳೆ ಅವರು ತಾವು ರಾಜಿನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ರಾಜಿನಾಮೆ ನಮಗೆ ದೊರೆತರೆ ಅದನ್ನು ಅಂಗೀಕರಿಸುತ್ತೇವೆ. ಅಜಯ್ ಶಿರ್ಕೆ ಅವರಿಗೆ ತಮ್ಮ ನಿರ್ಣಯವನ್ನು ಬದಲಿಸಿಕೊಳ್ಳಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಅನಂತರ ಅವರ ರಾಜಿನಾಮೆ ವಿಚಾರವನ್ನು ಪುನರ್ ಪರಿಶೀಲಿಸಲಾಗುತ್ತದೆ' ಎಂದು ದಾಲ್ಮಿಯಾ ಸ್ಪಷ್ಟಪಡಿಸಿದರು.
ಒಟ್ಟಾರೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸಿದ್ದ ಬಿಸಿಸಿಐ, ಕಳೆದುಹೋಗಿರುವ ತನ್ನ ಗೌರವವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ. ಕ್ರಿಕೆಟ್ ಲೋಕದಲ್ಲಿ 'ಜಗ್ಗು ದಾದಾ' ಎಂದೇ ಖ್ಯಾತರಾಗಿರುವ ದಾಲ್ಮಿಯಾ ಅವರು ತಾತ್ಕಾಲಿಕವಾಗಿ ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದು, ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಹಿಂದೆ ಬಿಸಿಸಿಐ ಅಧ್ಯಕ್ಷರಾಗಿದ್ದ ಅವರು, 2006ರಲ್ಲಿ ಬಿಸಿಸಿಐನ ಆರ್ಥಿಕ ಅವ್ಯವಹಾರ ಪ್ರಕರಣಕ್ಕೆ ಸಿಲುಕಿ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಅಲ್ಲದೆ ಆದಾಯ ತೆರಿಗೆ ಅಧಿಕಾರಿಗಳಿಂದ ವಿಚಾರಣೆ ಕೂಡ ಎದುರಿಸಿದ್ದರು.
ಇದೀಗ ತಮ್ಮ ಮೂರನೇ ಇನ್ನಿಂಗ್ಸ್ ಆರಂಭಿಸಿರುವ ದಾಲ್ಮಿಯಾ ಅವರು, ಕಳೆಗುಂದಿರುವ ಭಾರತೀಯ ಕ್ರಿಕೆಟ್ಗೆ ಮರಳಿ ಹಳೆಯ ಗೌರವವನ್ನು ಕೊಡಿಸುತ್ತಾರೆಯೇ ಅಥವಾ ಉಳಿದಿರುವ ಅಲ್ಪ ಮಾನವನ್ನೂ ತೆಗೆಯುತ್ತಾರೆಯೇ ಕಾದು ನೋಡಬೇಕಿದೆ.