ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿವಾದಕ್ಕೀಡಾದ ಧೋನಿ ಷೇರು ವ್ಯವಹಾರ

ಮಹೇಂದ್ರ ಸಿಂಗ್ ಧೋನಿ ಅವರು ವಿವಾದದಲ್ಲಿ ಸಿಲುಕಿಕೊಂಡಿದ್ದು, ಖಾಸಗಿ ಸಂಸ್ಥೆಯಲ್ಲಿ ..

Srinivasa Murthy VN
Updated On : 3 Jun 2013, 3:52 am

ಚೆನ್ನೈ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದು, ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ಷೇರುವ್ಯವಹಾರ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ಧೋನಿ ಮತ್ತು ಭಾರತ ಕ್ರಿಕೆಟ್ ತಂಡದ ಇತರೆ ಮೂವರು ಆಟಗಾರರು ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿರುವ ಕ್ರೀಡಾ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದರಲ್ಲಿ ಧೋನಿ ಅವರು ಷೇರು ಹೊಂದಿದ್ದು, ಈ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಧೋನಿ ಅವರ ಆಪ್ತ ಸ್ನೇಹಿತರಾದ ಅರುಣ್ ಪಾಂಡೆ ಅವರ ಒಡೆತನದ ರಿತಿ ಸ್ಪೋರ್ಟ್ಸ್ ಸಂಸ್ಥೆಗೆ ಈ ನಾಲ್ವರು ಆಟಗಾರರು ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದು, ಇದೇ ಸಂಸ್ಥೆಯಲ್ಲಿ ಧೋನಿ ಶೇ.15 ರಷ್ಟು ಷೇರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2010ರಲ್ಲಿ ರಿತಿ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಧೋನಿ ಅವರು 3ವರ್ಷದ ಅವಧಿಗೆ ಸುಮಾರು 210 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿವರ್ಷ ಸುಮಾರು 70 ಕೋಟಿ ರು.ಗಳಷ್ಟು ಭಾರಿ ಮೊತ್ತ ಅವರಿಗೆ ಸಂದಾಯವಾಗುತ್ತದೆ. ಅಂತೆಯೆ ಭಾರತದ ಇತರೆ ಆಟಗಾರರಾದ ರವೀಂದ್ರ ಜಡೇಜಾ, ಸುರೇಶ್ ರೈನಾ, ಪ್ರಗ್ಯಾನ್ ಓಜಾ ಅವರು ಕೂಡ ರಿತಿ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದೀಗ ವಿವಾದ ಹುಟ್ಟಿಕೊಂಡಿರುವುದು ಇಲ್ಲೇ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಿತಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಒಪ್ಪಂದ ಮಾಡಿಕೊಂಡಿರುವುದರಿಂದ ಇದು ಬಿಸಿಸಿಐ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹಿರಿಯ ಮಾಜಿ ಆಟಗಾರ ಮಣೀಂದರ್ ಸಿಂಗ್ ಅವರು, 'ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಈ ನಾಲ್ವರು ಆಟಗಾರರಿದ್ದು, ಆಡುವ ಅಂತಿಮ 11 ಜನರ ಪಟ್ಟಿಯನ್ನು ನಾಯಕ, ಉಪನಾಯಕ ಮತ್ತು ತಂಡದ ಕೋಚ್ ನಿರ್ಧರಿಸುತ್ತಾರೆ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ನಾಯಕನ ಅಭಿಪ್ರಾಯವೇ ನಿರ್ಣಾಯಕವಾಗಿದ್ದು, ಈ ಅಭಿಪ್ರಾಯದ ಮೇಲೆ ಧೋನಿ ಅವರ ಈ ವ್ಯವಹಾರಿಕ ಒಪ್ಪಂದ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ನಾಯಕನ ಈ ಅಭಿಪ್ರಾಯದ ಮೇಲೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಯು ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ತಲೆತಗ್ಗಿಸಿರುವ ಭಾರತೀಯ ಕ್ರಿಕೆಟ್‌ಗೆ ಒಂದರ ಮೇಲೆ ಒಂದರಂತೆ ವಿವಾದಗಳು ಬಂದು ಬೀಳುತ್ತಿವೆ. ಇದೀಗ ಸ್ವತಃ ಭಾರತ ಕ್ರಿಕೆಟ್ ತಂಡದ ನಾಯಕ ಧೋನಿ ಅವರು ವಿವಾದಕ್ಕೆ ಸಿಲುಕಿರುವುದು ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement