ಆಂತರಿಕ ಭದ್ರಾತಾ ಸಭೆಗೆ 'ಜಯಾ' ಗೈರು
ನವದೆಹಲಿಯಲ್ಲಿ ನಡೆಯುವ ಆಂತರಿಕ ಭದ್ರತಾ ಸಭೆಯಿಂದ ದೂರ ಉಳಿಯಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ಧರಿಸಿದ್ದಾರೆ.
ಚೆನ್ನೈ: ನವದೆಹಲಿಯಲ್ಲಿ ನಡೆಯುವ ಆಂತರಿಕ ಭದ್ರತಾ ಸಭೆಯಿಂದ ದೂರ ಉಳಿಯಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ಧರಿಸಿದ್ದಾರೆ.
ಜೂನ್ 5ರಂದು ಅಂದರೆ ನಾಳೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಂತರಿಕ ಭದ್ರತಾ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವಂತೆ ಈ ಹಿಂದೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿತ್ತು. ಆದರೆ ಈ ಸಭೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಗೈರು ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಾಳಿನ ಸಭೆಯಲ್ಲಿ ಭಾಗವಹಿಸುವ ಎಲ್ಲ ಮುಖ್ಯಮಂತ್ರಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿರುವ ಅಧಿಕಾರಿಗಳು, ಇದಕ್ಕಾಗಿ 10 ನಿಮಿಷಗಳ ಕಾಲಾವಕಾಶವನ್ನು ನೀಡಿದ್ದಾರೆ. ಈ 10 ನಿಮಿಷದಲ್ಲಿ ಮುಖ್ಯಮಂತ್ರಿಗಳು ತಮ್ಮ ಭಾಷಣ ಮಾಡಿ ಮುಗಿಸಬೇಕಿದೆ. ಈ ಅಂಶ ಜಯಲಲಿತಾ ಅವರಿಗೆ ಇರುಸು ಮುರುಸು ಉಂಟುಮಾಡಿದ್ದು, ಇದೇ ಕಾರಣಕ್ಕೆ ಅವರು ನಾಳಿನ ಸಭೆಗೆ ಗೈರಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಗೈರು ಹಾಜರಾತಿ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರಬರೆದಿರುವ ಜಯಲಲಿತಾ ಅವರು, ತಮ್ಮ ಬದಲಿಗೆ ರಾಜ್ಯದ ಗೃಹ ಮಂತ್ರಿ, ಗೃಹ ಕಾರ್ಯದರ್ಶಿ ಮತ್ತು ತಮಿಳುನಾಡು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮಿಳುನಾಡು ರಾಜ್ಯದ ಭದ್ರತಾ ಸಮಸ್ಯೆಗಳನ್ನು ಕೇವಲ 10 ನಿಮಿಷಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಜಯಲಲಿತಾ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕಳೆದ ಬಾರಿಯ ಸಭೆಯಲ್ಲಿ ಹೆಚ್ಚು ಹೊತ್ತು ಮಾತನಾಡಲು ಅವಕಾಶ ನೀಡದ ಕಾರಣಕ್ಕಾಗಿ ಸಭೆಯಿಂದ ಹೊರನಡೆದಿದ್ದ ಜಯಲಲಿತಾ, ಆಂತರಿಕ ಭದ್ರತಾ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅರೋಪಿಸಿದ್ದರು.