ಓಟಿಗಾಗಿ ನೋಟು: ರಾಂಚಿ ಮಾಜಿ ಮೇಯರ್ ಶರಣು
ರಾಂಚಿ: ಓಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಂಚಿಯ ಮಾಜಿ ಮೇಯರ್ ರಾಮ ಖಲ್ಕೋ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ರಾಂಚಿಯಲ್ಲಿ ಕಳೆದ ಏಪ್ರಿಲ್ 8ರಂದು ನಡೆದಿದ್ದ ಮೇಯರ್ ಚುನಾವಣೆ ಸಂದರ್ಭದಲ್ಲಿ ಮಾಜಿ ಮೇಯರ್ ರಾಮ ಖಲ್ಕೋ ಅವರು ತಾವು ತಂಗಿದ್ದ ಹೋಟೆಲ್ ಕೊಠಡಿಯಲ್ಲಿ ಮುನ್ಸಿಪಲ್ ಸದಸ್ಯರಿಗೆ ಹಂಚಲು ಇಡಲಾಗಿದ್ದ ಸುಮಾರು 22 ಲಕ್ಷ ಹಣವನ್ನು ಪೊಲೀಸರು ದಾಳಿ ಮಾಡಿ ಜಪ್ತಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ ಖಲ್ಕೋ ಅವರನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಲಯ ರಾಮ ಖಲ್ಕೋ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಮಾಡಿತ್ತು.
ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ಮಾಜಿ ರಾಮ ಖುಲ್ಕೋ ಅವರು ತಲೆಮರೆಸಿಕೊಂಡಿದ್ದರು. ಆದರೆ ರಾಮ ಖಲ್ಕೋ ಅವರ ನಾಪತ್ತೆ ವಿರುದ್ಧ ರಾಂಚಿ ಹೈಕೋರ್ಟ್ ಮೆಟ್ಟಿಲೇರಿದ್ದ ಪೊಲೀಸರು ಅವರ ವಿರುದ್ಧ ವಾರಂಟ್ ಜಾರಿ ಮಾಡುವಂತೆ ಕೋರಿದ್ದರು. ಅದರಂತೆ ನ್ಯಾಯಾಲಯ ರಾಮ ಖಲ್ಕೋ ಅವರ ವಿರುದ್ಧ ವಾರಂಟ್ ಜಾರಿ ಮಾಡಿದ ಹಿನ್ನಲೆಯಲ್ಲಿ ಇಂದು ರಾಮ ಖಲ್ಕೋ ಅವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ನ್ಯಾಯಾಲಯ ರಾಮ ಖಲ್ಕೋ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.