ಮ್ಯಾಚ್ ಫಿಕ್ಸಿಂಗ್: ಅಶ್ರಫುಲ್ ಅಮಾನತು
ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಶ್ರಫುಲ್ ಅವರನ್ನು ಅಮಾನತು ಮಾಡಲಾಗಿದೆ.
ಢಾಕಾ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್)ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಶ್ರಫುಲ್ ಅವರನ್ನು ಅಮಾನತು ಮಾಡಲಾಗಿದೆ.
ಭಾರತದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕ್ರೀಡಾ ಕ್ಷೇತ್ರವನ್ನು ತಲ್ಲಣಗೊಳಿಸಿದ್ದರೆ, ನೆರೆಯ ಬಾಂಗ್ಲಾದೇಶದಲ್ಲಿಯೂ ಮ್ಯಾಚ್ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹಮದ್ ಅಶ್ರಫುಲ್ ಅವರು, ವಿಚಾರಣೆ ವೇಳೆ ತಾವು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಪಾಲ್ಗೊಂಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ವಿರುದ್ಧ ಕಠಿಣ ನಿಲುವ ತಳೆದಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಅಶ್ರಫುಲ್ ಅವರನ್ನು ಎಲ್ಲ ರೀತಿಯ ಕ್ರಿಕೆಟ್ ಮಾದರಿಯಿಂದ ಅಮಾನತು ಮಾಡಿದೆ.
ಅಲ್ಲದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಬಿಸಿಬಿ ತಿಳಿಸಿದೆ. ಕಳೆದ ಬಾರಿ ನಡೆದ ಬಿಪಿಎಲ್ ಪಂದ್ಯಾವಳಿಯ ಢಾಕಾ ಗ್ಲಾಡಿಯೇಟರ್ಸ್ ಮತ್ತು ಚಿತ್ತಗಾಂಗ್ ಕಿಂಗ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಶ್ರಫುಲ್ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೆ ಢಾಕಾ ಗ್ಲಾಡಿಯೇಟರ್ಸ್ ಪರ ಆಡುತ್ತಿರುವ ಅಶ್ರಫುಲ್ ಅವರು ಬರಿಸಲ್ ಬರ್ನರ್ಸ್ ತಂಡದ ವಿರುದ್ಧದ ಪಂದ್ಯವನ್ನು ಸೋಲಲು ಸುಮಾರು 12,800 ಡಾಲರ್ ಹಣವನ್ನು ಪಡೆದಿದ್ದರು ಮತ್ತು ಈ ಮೊತ್ತದ ಚೆಕ್ಕನ್ನು ಅವರು ಬ್ಯಾಂಕಿಗೆ ಹಾಕಿದ್ದಾಗ ಅದು ಬೌನ್ಸ್ ಆಗಿತ್ತು. ಈ ಸಂದರ್ಭದಲ್ಲಿ ಪ್ರಕರಣ ಬಯಲಿಗೆ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.