ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ವಿರುದ್ದ 'ಮೋಕಾ' ದಾಖಲು
ನ್ಯಾಯಾಲಯ ಶ್ರೀಶಾಂತ್ ಜಾಮೀನು ಅರ್ಜಿ ವಜಾಗೊಳಿಸಿದ್ದು, ದೆಹಲಿ ಪೊಲೀಸರು ಅವರ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು, ಪ್ರಕರಣದಲ್ಲಿ ಭೂಗತ ಜಗತ್ತಿನ ಪಾತಕಿಗಳ ನಂಟಿರುವ ಕುರಿತು ಸಂಶಯವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಬಲಪಡಿಸಲು ನಿರ್ಧರಿಸಿರುವ ಪೊಲೀಸರು, ಶ್ರೀಶಾಂತ್ ಮತ್ತು ಸ್ಪಾಟ್ ಫಿಕ್ಸಿಂಗ್ನಲ್ಲಿ ಬಂಧನಕ್ಕೀಡಾಗಿರುವ ಇತರೆ 25 ಆರೋಪಿಗಳ ವಿರುದ್ಧ ಮೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕಾಯ್ದೆ ಪ್ರಕಾರ ತಪ್ಪೊಪ್ಪಿಗೆ ನೀಡುವ ಆರೋಪಿಗಳು ಅಥವಾ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಉಪ ಪೊಲೀಸ್ ಆಯುಕ್ತ ಅಥವಾ ಅದೇ ಸ್ಥಾನದ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ಇದರಿಂದ ಆರೋಪಿಗಳು ಮತ್ತು ಸಾಕ್ಷಿಗಳು ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕಡಿವಾಣ ಬೀಳುತ್ತದೆ.
1994ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದ ಮೋಕಾ ಕಾಯ್ದೆ ಯೋಜಿತ ಅಪರಾಧಗಳ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ವಿಶೇಷ ಹಕ್ಕನ್ನು ನೀಡುತ್ತದೆ. ಆರಂಭದಲ್ಲಿ ಈ ಕಾಯ್ದೆಯನ್ನು ಖೋಟಾ ನೋಟು ಚಲಾವಣೆ ಮತ್ತು ಮಂಪರು ಭಯೋತ್ಪಾದನೆ (ಮಾದಕ ವಸ್ತುಗಳ ಅನಧಿಕೃತ ರವಾನೆ ಮತ್ತು ಮಾದಕ ವಸ್ತುಗಳ ಕಾನೂನು ಬಾಹಿರ ಬಳಕೆ)ಯಂತಹ ಅಪರಾಧಗಳಲ್ಲಿ ಬಳಸಲಾಗುತ್ತಿತ್ತು. ಇದೀಗ ಇದೇ ಮೊದಲ ಬಾರಿಗೆ ಕ್ರೀಡಾ ಕ್ಷೇತ್ರದ ಅಪರಾಧಗಳ ಪತ್ತೆಗಾಗಿ ಬಳಕೆ ಮಾಡಲಾಗುತ್ತಿದೆ.
ಕ್ರಿಕೆಟಿಗರ ಜಾಮೀನು ಅರ್ಜಿ ವಜಾ, ಜೂನ್ 18ರವರೆಗೆ ನ್ಯಾಯಾಂಗ ಬಂಧನ
ಈ ನಡುವೆ ಜಾಮೀನು ಕೋರಿ ಕ್ರಿಕೆಟಿಗರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿದೆ. ಅಲ್ಲದೆ ಜೂನ್ 18ರವರೆಗೆ ಕ್ರಿಕೆಟಿಗರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಕ್ರಿಕೆಟಿಗರಾದ ಶ್ರೀಶಾಂತ್, ಅಜಿತ್ ಚಾಂಡಿಲಾ ಅವರು ತಮಗೆ ಜಾಮೀನು ನೀಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.