ಆಂತರಿಕ ಭದ್ರತೆ ಕುರಿತು ಶ್ವೇತಪತ್ರ ಹೊರಡಿಸಿ: ಮೋದಿ
ಭದ್ರತಾ ವಿಚಾರವಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ನರೇಂದ್ರ ಮೋದಿ ಅವರು ಆಗ್ರಹಿಸಿದ್ದಾರೆ.
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಚಾಟಿ ಬೀಸಿದ್ದು, ಭದ್ರತಾ ವಿಚಾರವಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಆಂತರಿಕ ಭದ್ರತಾ ಸಭೆಯಲ್ಲಿ ಪಾಲ್ಗೊಂಡಿರುವ ಅವರು, ದೇಶದ ಭದ್ರತಾ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದ್ದು, ಇದರಿಂದ ರಾಜ್ಯಸರ್ಕಾರಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಕಳೆದ ಹತ್ತು ವರ್ಷಗಳಿಂದ ದೇಶದ ಆಂತರಿಕ ಭದ್ರತಾ ವಿಚಾರವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಮತ್ತು ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
'ಸರ್ಕಾರದ ಆಧುನಿಕ 'ಭದ್ರತಾ ಬಜೆಟ್' ಹತ್ತು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸರ್ಕಾರ ಕೈಗೊಂಡಿರುವ ಬದಲಾವಣೆಗಳಾದರೂ ಏನು? ಸರ್ಕಾರದ ಈ ನಡವಳಿಕೆ ರಾಜ್ಯ ಸರ್ಕಾರಗಳಿಗೆ ಹೊರೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ ಎಲ್ಲ ರಾಜ್ಯಗಳಲ್ಲಿಯೂ ಎನ್‌ಸಿಟಿಸಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳ ಸ್ಥಾಪನೆಯ ಕಲ್ಪನೆಯೇ ತುಂಬಾ ಪುರಾತನವಾದದ್ದು. ಇದರಿಂದ ಒಕ್ಕೂಟ ರಚನಾ ವ್ಯವಸ್ಥೆಯ ಮೇಲೆ ಬಾರಿ ಹೊಡೆತ ಬೀಳಲಿದೆ. ಕೇಂದ್ರ ಸರ್ಕಾರ ಕೇವಲ ಸ್ಥಳೀಯ ಭದ್ರತೆಯ ಕುರಿತು ಚಿಂತಿಸುತ್ತಿದೆ. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆಯಂತಹ ರಾಷ್ಟ್ರೀಯ ಸಮಸ್ಯೆಗಳ ಕುರಿತು ಅದು ತಲೆಕೆಡಿಸಿಕೊಂಡಂತ್ತಿಲ್ಲ' ಎಂದರು.
'ಕೇಂದ್ರದ ಯುಪಿಎ ಸರ್ಕಾರ ತನ್ನ ಭಾಷಣಗಳಲ್ಲಿ ಮಾತ್ರ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ಕುರಿತು ಮಾತನಾಡುತ್ತದೆ. ಆದರೆ ತನ್ನ ಕಾರ್ಯದಲ್ಲಿ ಮಾತ್ರ ರಾಷ್ಟ್ರೀಯ ಭದ್ರತೆಯನ್ನೇ ಬದಿಗೊತ್ತಿ ಸ್ಥಳೀಯ ಭದ್ರತಾ ಸಮಸ್ಯೆಗಳ ಕುರಿತು ಕಾರ್ಯಾಚರಣೆ ಮಾಡುವಂತೆ ಸೂಚಿಸುತ್ತದೆ. ಯಾವುದೋ ಒಂದು ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ರಾಷ್ಟ್ರೀಯ ಭದ್ರತಾ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ' ಎಂದು ಮೋದಿ ಹೇಳಿದರು.
ಒಟ್ಟಾರೆ ಇಂದು ನವದೆಹಲಿಯಲ್ಲಿ ನಡೆದ ಆಂತರಿಕ ಭದ್ರತಾ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ಭದ್ರತಾ ವಿಚಾರವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ವೈಫಲ್ಯತೆಯನ್ನು ಎತ್ತಿ ಹಿಡಿಯುವಲ್ಲಿ ಸಫಲರಾದರು.