ರಾಹುಲ್ಗೆ 500 ಕೋಟಿ ರು. ಲೀಗಲ್ ನೋಟಿಸ್
ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಗಣ ಪರಿಷತ್ತು ಕಾನೂನು ನೋಟಿಸ್ ನೀಡಿದ್ದು, ಸ್ಪಂದಿಸದಿದ್ದರೆ 500 ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ...
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ಗಣ ಪರಿಷತ್ತು ಕಾನೂನು ನೋಟಿಸ್ ನೀಡಿದ್ದು, ನಿಗದಿತ ಕಾಲಮಿತಿಯೊಳಗೆ ಸ್ಪಂದಿಸದಿದ್ದರೆ 500 ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಹಿಂದೆ ಅಸ್ಸಾಂನ ಪ್ರಮುಖ ರಾಜಕೀಯ ಪಕ್ಷ ಅಸ್ಸಾಂ ಗಣ ಪರಿಷದ್ (ಎಜಿಪಿ) ಕುರಿತು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರು, 'ಹಿಂದೆ ಅಸ್ಸಾಂನಲ್ಲಿ ಅಡಳಿತ ನಡೆಸಿದ್ದ ಎಜಿಪಿ ಪಕ್ಷ ದಂಗೆಕೋರರ ಸಹಾಯದಿಂದ ಅಧಿಕಾರಕ್ಕೆ ಬಂದಿತ್ತು' ಎಂದು ಹೇಳಿಕೆ ನೀಡಿದ್ದರು. ಆದರೆ ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಎಜಿಪಿ ಪಕ್ಷ, ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿಮಾಡಿದೆ. ಅಲ್ಲದೆ 15 ದಿನಗಳೊಳಗಾಗಿ ಈ ಬಗ್ಗೆ ಪ್ರತಿಕ್ರಿಯಿಸದಿದ್ದರೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ 500 ಕೋಟಿ ರು.ಗಳ ಪರಿಹಾರ ಕೇಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ರಾಹುಲ್ ಗಾಂಧಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಎಜಿಪಿ ಪಕ್ಷದ ರಾಜ್ಯಾಧ್ಯಕ್ಷ ಪ್ರಫುಲ್ ಕುಮಾರ್ ಮಹಾಂತ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಅವರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಎಜಿಪಿ ಪಕ್ಷದ ಯುವ ಕಾರ್ಯಕರ್ತರು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ಹೇಳಿಕೆಗೆ ಧನಿಗೂಡಿಸಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗಗೋಯ್ ಅವರು, ಈ ಹಿಂದೆ ಆಡಳಿತ ನಡೆಸಿದ್ದ ಎಜಿಪಿ ಪಕ್ಷ ಯುಎಲ್ಎಫ್ ಉಗ್ರ ಸಂಘಟನೆಯೊಂದಿಗೆ ಕೈ ಜೋಡಿಸಿತ್ತು ಎಂದು ಆರೋಪಿಸಿದ್ದಾರೆ.