ರಾಜಸ್ತಾನ ತಂಡದಿಂದ ರಾಜ್ ಕುಂದ್ರಾಗೆ ಗೇಟ್ಪಾಸ್?
ಬೆಟ್ಟಿಂಗ್ ಪ್ರಕರಣದಿಂದಾಗಿ ವಿವಾದಕ್ಕೀಡಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ.
ನವದೆಹಲಿ: ಬೆಟ್ಟಿಂಗ್ ಪ್ರಕರಣದಿಂದಾಗಿ ವಿವಾದಕ್ಕೀಡಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ವೇಳೆ ದೆಹಲಿ ವಿಶೇಷ ಪೊಲೀಸರ ಬಳಿ ಬೆಟ್ಟಿಂಗ್ ನಡೆಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರನ್ನು, ತಂಡದಿಂದಲೇ ಹೊರಹಾಕಲು ರಾಜಸ್ತಾನ ರಾಯಲ್ಸ್ ತಂಡದ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಪ್ರಸ್ತುತ ತನಿಖಾ ಹಂತದಲ್ಲಿರುವ ಬೆಟ್ಟಿಂಗ್ ಪ್ರಕರಣದ ವಿಚಾರಣೆ ಪೂರ್ಣಗೊಂಡು ರಾಜ್ಕುಂದ್ರಾ ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ತಂಡದ ಸಹಮಾಲೀಕತ್ವ ಸ್ಥಾನದಿಂದ ಹೊರಹಾಕುವುದು ಬಹುತೇಕ ಖಚಿತವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜಸ್ತಾನ ರಾಯಲ್ಸ್ ತಂಡದ ಆಡಳಿತ ಮಂಡಳಿ, ಪ್ರಕರಣದಲ್ಲಿ ರಾಜ್ ಕುಂದ್ರಾ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಆಡಳಿತ ಮಂಡಳಿ ಸದಸ್ಯ ಸ್ಥಾನದಿಂದ ಅಮಾನತು ಮಾಡಿ, ತಂಡದಲ್ಲಿ ಅವರು ತೊಡಗಿಸಿರುವ ಅವರ ಪಾಲಿನ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಂಡದ ಮಾಲೀಕ ಮಂಡಳಿಯ ಅಧ್ಯಕ್ಷರಾದ ರಂಜಿತ್ ಬರ್ತಕುರ್ ಮತ್ತು ತಂಡದ ಸಿಇಓ ರಘು ಅಯ್ಯರ್ ಅವರು, 'ಬೆಟ್ಟಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾ ಪಾತ್ರ ಸಾಬೀತಾದರೆ ಅವರನ್ನು ಕೂಡಲೇ ಅಮಾನತು ಮಾಡಿ ಅವರ ಪಾಲಿನ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ ಆಟಗಾರರು ಸೇರಿದಂತೆ ತಂಡದಲ್ಲಿರುವ ಎಲ್ಲ ಸದಸ್ಯರಿಗೂ ಇದೇ ನಿಯಮವನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜಸ್ತಾನ ತಂಡದಲ್ಲಿ ರಾಜ್ ಕುಂದ್ರಾ ಅವರು ಸಣ್ಣ ಪ್ರಮಾಣದ ಷೇರುದಾರರಾಗಿದ್ದು, ತಂಡದಲ್ಲಿ ಅವರು ಶೇ.11.7 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಮಾಲೀಕ ಮಂಡಳಿ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ 'ರಾಜ್ ಕುಂದ್ರಾ ಅವರು ಸಜ್ಜನ ವ್ಯಕ್ತಿಯಾಗಿದ್ದು, ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ನಾವು ನಂಬಿದ್ದೇವೆ. ತನಿಖೆಯಿಂದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ' ಎಂದು ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ಮಂಡಳಿ ಹೇಳಿದೆ.
ಒಟ್ಟಾರೆ ಬೆಟ್ಟಿಂಗ್ ಪ್ರಕರಣ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ರಾಜಸ್ತಾನ ತಂಡದಲ್ಲಿ ಬಿರುಗಾಳಿ ಎದ್ದಿದ್ದು, ಒಂದೆಡೆ ಬಿಸಿಸಿಐ ತಂಡವನ್ನು ಐಪಿಎಲ್ನಿಂದ ಹೊರಹಾಕಲು ಚಿಂತನೆ ನಡೆಸುತ್ತಿದ್ದರೆ, ಮತ್ತೊಂದೆಡೆ ತಂಡದ ಸಹ ಮಾಲೀಕನನ್ನು ಹೊರಹಾಕಲು ಆರ್.ಆರ್ ತಂಡದ ಆಡಳಿತ ಮಂಡಳಿ ಚಿಂತನೆಯಲ್ಲಿ ತೊಡಗಿದೆ.