ವಿರೋಧವಿಲ್ಲ, ಆದರೆ ಚರ್ಚೆ ನಡೆಸಬೇಕು: ಪವಾರ್
ಮುಂಬೈ: ಆಹಾರ ಭದ್ರತಾ ಮಸೂದೆಗೆ ತಮ್ಮ ಮತ್ತು ತಮ್ಮ ಪಕ್ಷದ ವಿರೋಧವಿಲ್ಲ. ಆದರೆ ಮಸೂದೆ ಕುರಿತು ಸದನದಲ್ಲಿ ಕೂಲಂಕುಷ ಚರ್ಚೆ ನಡೆಸಬೇಕು ಎಂದು ಕೇಂದ್ರ ಕೃಷಿ ಸಚಿವ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಹೇಳಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಶರದ್ ಪವಾರ್ ಅವರು, ನಾನು ಕೂಡ ಆಹಾರ ಭದ್ರತಾ ಮಸೂದೆಗೆ ಬೆಂಬಲ ನೀಡುತ್ತೇನೆ. ಆದರೆ ಇದು ಸಂಸತ್‌ನಲ್ಲಿ ಚರ್ಚಿಸಿದ ಬಳಿಕವೇ ಮಸೂದೆಗೆ ಅನುಮೋದನೆ ನೀಡಬೇಕು ಎಂದು ಅವರು ಹೇಳಿದರು. 'ನಾನು ಆಹಾರ ಭದ್ರತಾ ಮಸೂದೆಯ ವಿರೋಧಿಯಲ್ಲ. ಆದರೆ ಈ ಬಗ್ಗೆ ಚರ್ಚೆ ನಡೆಯಬೇಕು ಎಂಬುದು ನನ್ನ ವಾದ. ಅಷ್ಟೇ ಅಲ್ಲದೆ ವಿಪಕ್ಷಗಳು ಕೂಡ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಅವರು ಚರ್ಚೆ ನಡೆಸಬೇಕು ಎಂದು ಕೇಳುತ್ತಿದ್ದಾರೆ. ಚರ್ಚೆಯ ಬಳಿಕ ಮಸೂದೆಗೆ ಅನುಮೋದನೆ ನೀಡಲಿ. ಯಾವುದೇ ಮಸೂದೆಯನ್ನು ಜಾರಿಗೊಳಿಸಬೇಕಾದರೆ ಅಲ್ಲಿ ಕಾನೂನು ಪಾಲನೆ ಅಗತ್ಯ. ಕಾನೂನಿನ ಪ್ರಕಾರವೇ ಮಸೂದೆಯನ್ನು ಜಾರಿ ಮಾಡಬೇಕು' ಎಂದು ಸಚಿವ ಪವಾರ್ ಹೇಳಿದರು.
ಈ ಹಿಂದೆ ಕೇಂದ್ರ ಸರ್ಕಾರದ ಉದ್ದೇಶಿತ ಆಹಾರ ಭದ್ರತಾ ಮಸೂದೆಯ ಕುರಿತು ಮಾತನಾಡಿದ್ದ ಶರದ್ ಪವಾರ್ ಅವರು, ಈ ಮಸೂದೆಯಿಂದಾಗಿ ಧಾನ್ಯ ಪದಾರ್ಥಗಳಿಗೆ ಸಾಕಷ್ಟು ರಿಯಾಯಿತಿ ನೀಡಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾಯವಿದ್ದು, ರೈತರೂ ಕೂಡ ಕೃಷಿಯ ಮೇಲೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಸೂದೆ ಕುರಿತು ಚರ್ಚಿಸಿ, ಅನುಮೋದನೆಗೊಳಿಸಿದ ನಂತರ ಜಾರಿಗೆ ತರಬೇಕು ಎಂದು ಹೇಳಿದ್ದರು.