2014ರ ನಂತರವೇ ತೆಲಂಗಾಣ ರಚನೆ: ಅಜಿತ್ ಸಿಂಗ್
2014 ಲೋಕಸಭಾ ಚುನಾವಣೆಯ ನಂತರವೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಚಾಲನೆ ದೊರೆಯಲಿದೆ ಎಂದು ಆರ್ಎಲ್ ಡಿ ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ.
ಹೈದರಾಬಾದ್: 2014 ಲೋಕಸಭಾ ಚುನಾವಣೆಯ ನಂತರವೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಚಾಲನೆ ದೊರೆಯಲಿದೆ ಎಂದು ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಅಜಿತ್ ಸಿಂಗ್ ಅವರು ಹೇಳಿದ್ದಾರೆ.
ಹೈದರಾಬಾದಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಕ್ಕಾದರೂ ತೆಲಂಗಾಣ ಭಾಗದ ಜನರ ವಿಶ್ವಾಸಗಳಿಸಬೇಕೆಂದರೆ ಅವರ ಬೇಡಿಕೆ ಈಡೇರಿಸುವುದು ಅನಿವಾರ್ಯ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಡೆಯಲೇ ಬೇಕಾದ ಕಾರ್ಯವಾಗಿದ್ದು, ಆದರೆ ಪ್ರಸ್ತುತ ಇದು ವಿಳಂಬವಾಗಬಹುದು ಎಂದರು.
ತೆಲಂಗಾಣ ಭಾಗದ ರೈತರು ಕಳೆದ ಹಲವು ದಶಕಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಪ್ರತ್ಯೇಕ ರಾಜ್ಯ ನೀಡುವ ಮೂಲಕ ಅವರಿಗಾದ ಅನ್ಯಾಯಗಳಿಗೆ ಅಲ್ಪವಾದರೂ ನಾವು ನ್ಯಾಯದೊರಕಿಸಿ ಕೊಡಬಹುದು. ಹೀಗಾಗಿಯೇ ತಾವು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಅಜಿತ್ ಸಿಂಗ್ ಹೇಳಿದರು.
ನನ್ನ ಪ್ರಕಾರ ಇದು ಎರಡು ಪಕ್ಷಗಳ ಅಜೆಂಡಾವಲ್ಲ. ಯುಪಿಎ ಆಗಲಿ ಅಥವಾ ಎನ್ಡಿಎ ಆಗಲಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಯೇ ತೀರಬೇಕು. ತೆಲಂಗಾಣ ಜನರ ವಿಶ್ವಾಸ ಗಳಿಸಬೇಕು ಎಂದರೆ ಅವರಿಗೆ ನ್ಯಾಯಾ ದೊರಕಿಸಿಕೊಡಬೇಕು. ಅಲ್ಲದೆ 2014ರಲ್ಲಿ ಲೊಕಸಭಾ ಚುನಾವಣೆ ಇದ್ದು, ಚುನಾವಣೆ ಮುಗಿದ ಬಳಿಕವಷ್ಟೇ ಪ್ರತ್ಯೇಕ ತೆಲಂಗಾಣ ರಾಜ್ಯರಚನೆಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.