ಒಬಾಮಗೆ ವಿಷ ಲೇಪಿತ ಪತ್ರ ರವಾನೆ; ಮಹಿಳೆಯ ಬಂಧನ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ವಿಷ ಲೇಪಿಸಿದ ಪತ್ರರವಾನೆಯಾಗಿದ್ದು, ಪ್ರಕರಣ ಸಂಬಂಧ ಟೆಕ್ಸಾಸ್ನ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರಿನಲ್ಲಿ ಬಂದಿದ್ದ, ಮೂರು ಖಾಸಗಿ ಪತ್ರಗಳು ಶ್ವೇತಭವನದ ಅಧಿಕಾರಿಗಳಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ಅಧಿಕಾರಿಗಳು ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದರು. ಪರಿಶೀಲನೆ ನಂತರ ಪತ್ರದಲ್ಲಿ ವಿಷ ಲೇಪನವಾಗಿರುವುದು ಪತ್ತೆಯಾಗಿತ್ತು. ಆದರೆ ಪತ್ರದಲ್ಲಿ ಯಾರು ಕಳುಹಿಸಿದ್ದಾರೆ ಎನ್ನುವ ಕುರಿತು ಮಾಹಿತಿ ಇರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತನಿಖೆ ನಡೆಸಿ ಪತ್ರ ಟೆಕ್ಸಾಸ್ನಿಂದ ರವಾನೆಯಾಗಿರುವ ಕುರಿತು ಪತ್ತೆ ಹಚ್ಚಿದರು.
ನಂತರ ಪತ್ರ ರವಾನಿಸಿದ್ದಾರೆ ಎನ್ನಲಾಗುತ್ತಿರುವ 35 ವರ್ಷದ ಟಿವಿ ನಿರೂಪಕಿಯಾದ ಶಾನನ್ ರಿಚರ್ಡ್ಸನ್ ಅಲಿಯಾಸ್ ಶಾನನ್ ರೋಜರ್ಸ್ ಅವರನ್ನು ಅಮೆರಿಕ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಮೇ 20 ರಂದು ರಿಚರ್ಡ್ಸನ್ ಎಂಬ ಮಹಿಳೆ ಒಬಾಮ ಅವರಿಗೆ 3 ವಿಷ ಲೇಪಿತ ಪತ್ರಗಳನ್ನು ರವಾನಿಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಮಹಿಳೆಯ ಮೇಲಿನ ಆರೋಪ ಸಾಬೀತಾದರೆ ರಿಚರ್ಡ್ಸನ್ಗೆ ಕನಿಷ್ಟ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.