ವಿಪ್ ಉಲ್ಲಂಘನೆ: 15 ಆಂಧ್ರ ಶಾಸಕರ ಸದಸ್ಯತ್ವ ರದ್ದು
ಹೈದರಾಬಾದ್: ವಿಶ್ವಾಸ ಮತಯಾಚನೆ ವೇಳೆ ಪಕ್ಷಗಳ ವಿಪ್ ಉಲ್ಲಂಘಿಸಿದ್ದ ಆರೋಪದ ಮೇಲೆ 15 ಶಾಸಕರ ಶಾಸಕತ್ವವನ್ನು ಸ್ಪೀಕರ್ ಎನ್.ಮನೋಹರ್ ಅವರು ರದ್ದುಗೊಳಿಸಿದ್ದಾರೆ.
ಆಂಧ್ರ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ಅವರ ಮರಣಾನಂತರ ನಡೆದ ಅನಿರೀಕ್ಷಿತ ಬೆಳವಣಿಗಳಿಂದಾಗಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಈ ಬೆಳವಣಿಗೆಯಲ್ಲಿ ರಾಜಶೇಖರ ರೆಡ್ಡಿ ಅವರ ಪುತ್ರ ಮತ್ತು ಸಂಸದ ವೈಎಸ್ ಜಗನ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಅಲ್ಪ ಮತಕ್ಕೆ ಕುಸಿದಿದ್ದ ಆಂಧ್ರ ಕಾಂಗ್ರೆಸ್ ಸದನದಲ್ಲಿ ವಿಶ್ವಾಸ ಮತಯಾಚಿಸಿತ್ತು.
ಈ ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ್ದ ಶಾಸಕರು, ಪಕ್ಷದ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು. ವಿಪ್ ಉಲ್ಲಂಘನೆ ಪ್ರಕರಣವನ್ನು ಸತತ 2 ತಿಂಗಳಗಳ ಕಾಲ ವಿಚಾರಣೆ ನಡೆಸಿದ ಸ್ಪೀಕರ್ ಅವರು, ಇಂದು ವಿಪ್ ಉಲ್ಲಂಘನೆ ಮಾಡಿದ 17 ಶಾಸಕರ ಪೈಕಿ 15 ಶಾಸಕರ ಶಾಸಕತ್ವವನ್ನು ರದ್ದುಗೊಳಿಸಿದ್ದಾರೆ. ಮತ್ತಿಬ್ಬರು ಶಾಸಕರ ವಿಚಾರಣೆಯನ್ನು ಮುಂದೂಡಲಾಗಿದೆ. ಸ್ಪೀಕರ್ ಅವರು ಶಾಸಕತ್ವ ರದ್ದುಗೊಳಿಸಿರುವ 15 ಶಾಸಕರ ಪೈಕಿ 9 ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದು, 6 ಶಾಸಕರು ತೆಲುಗು ದೇಶಂ(ಟಿಡಿಪಿ) ಪಕ್ಷಕ್ಕೆ ಸೇರಿದವರಾಗಿದ್ದಾರೆ.