ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಫ್ಘನ್ ನಲ್ಲಿ ಉಗ್ರರ ದಾಳಿ

ಚಿತ್ರ ಕೃಪೆ: ರಾಯಿಟರ್ಸ್
Srinivasa Murthy VN
Updated On : 10 Jun 2013, 5:36 am

ಕಾಬುಲ್: ಮುಂಬೈ ಮೇಲಿನ ಉಗ್ರರ ದಾಳಿ ಮಾದರಿಯಲ್ಲಿ ಆಫ್ಘಾನಿಸ್ತಾನದ ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ನ್ಯಾಟೋ ಪಡೆಗಳ ಮೇಲೆ ಗುಂಡಿನ ಮಳೆಗರೆದಿದ್ದಾರೆ.

ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ನ್ಯಾಟೋ ಪಡೆಗಳ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಇಂದು ಬೆಳಗ್ಗೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು, ಹಲವು ಯೋಧರಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಆದರೆ ಘಟನೆಯಲ್ಲಿ ಯಾವುದೇ ಸೈನಿಕರು ಹತರಾದ ಕುರಿತು ವರದಿಗಳು ಬಂದಿಲ್ಲ. ಗುಂಡಿನ ಮೊರೆತದ ಶಬ್ಧ ಕೇಳುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ನ್ಯಾಟೋ ಸೈನಿಕರು ತಾಲಿಬಾನ್ನ ಆತ್ಮಹತ್ಯಾ ದಳದ ಉಗ್ರರ ಮೇಲೆ ಪ್ರತಿ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ 7 ತಾಲಿಬಾನ್ ಉಗ್ರರು ಹತರಾಗಿದ್ದು, ಎಷ್ಟು ಮಂದಿ ದಾಳಿ ನಡೆಸಿದ್ದರು ಎಂಬ ಅಂಶದ ಕುರಿತು ಮಾಹಿತಿಗಳಿಲ್ಲ ಎಂದು ಆಫ್ಘನ್ ಆಂತರಿಕ ವ್ಯವಹಾರಗಳ ಸಚಿವ ಸಿದ್ದಿಖ್ ಸಿದ್ದಿಖಿ ಅವರು ಹೇಳಿದ್ದಾರೆ. ಅಲ್ಲದೆ ಉಗ್ರರು ತಂದಿದ್ದ ಎಕೆ47, ಗ್ರೆನೇಡ್ಗಳು, ಬಾಂಬ್ ಸಹಿತ ಒಂದು ರಾಕೆಟ್ ಲಾಂಚರ್ ಮತ್ತು ಅತಿ ಹೆಚ್ಚು ತೀವ್ರತೆಯ ಬಾಂಬ್ಅನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ನಂತರ ಕಾಬುಲ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಘಟನೆಯಲ್ಲಿ ಇಬ್ಬರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಾಬುಲ್ನ ಉಪ ಪೊಲೀಸ್ ಆಯುಕ್ತ ದಾವೂದ್ ಅಮೀನ್ ತಿಳಿಸಿದ್ದಾರೆ.

ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ತಾಲಿಬಾನ್ ಮುಖಂಡ ಜಬಿವುಲ್ಲಾ ಮುಜಾಹಿದ್, ದಾಳಿಯನ್ನು ತಾವೇ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಟೋ ಪಡೆಗಳ ಮೇಲೆ ದಾಳಿ ನಡೆಸುವುದು ತಮ್ಮ ಗುರಿಯಾಗಿದ್ದು, ಇಂದು ಅದು ವಿಫಲಗೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ದಾಳಿ ಮಾಡುವುದಾಗಿ ಎಚ್ಛರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement